ADVERTISEMENT

ಯಲಹಂಕ: ಕೈಗೆಟಕುವ ದರದಲ್ಲಿ ಸುಸಜ್ಜಿತ ಕ್ರೀಡಾಸೌಲಭ್ಯ

ಕೆಂಪಾಪುರದಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಸಚಿವ ಕೃಷ್ಣಬೈರೇಗೌಡ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2024, 16:04 IST
Last Updated 30 ನವೆಂಬರ್ 2024, 16:04 IST
ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಕೆಂಪಾಪುರದ ಕಾಫಿಬೋರ್ಡ್‌ ಬಡಾವಣೆಯಲ್ಲಿ ಬಿಬಿಎಂಪಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಿದ ಸಚಿವ ಕೃಷ್ಣಬೈರೇಗೌಡ, ಟೇಬಲ್‌ ಟೆನ್ನಿಸ್‌ ಆಡಿದರು.
ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಕೆಂಪಾಪುರದ ಕಾಫಿಬೋರ್ಡ್‌ ಬಡಾವಣೆಯಲ್ಲಿ ಬಿಬಿಎಂಪಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಿದ ಸಚಿವ ಕೃಷ್ಣಬೈರೇಗೌಡ, ಟೇಬಲ್‌ ಟೆನ್ನಿಸ್‌ ಆಡಿದರು.   

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಕೆಂಪಾಪುರದ ಕಾಫಿಬೋರ್ಡ್‌ ಬಡಾವಣೆಯಲ್ಲಿ ಬಿಬಿಎಂಪಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣವನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ, ಈಜುಕೊಳದಲ್ಲಿ ಈಜುವ ಮೂಲಕ ಭಿನ್ನವಾಗಿ ಉದ್ಘಾಟಿಸಿದರು.

ಕ್ರೀಡಾಂಗಣದ ಉದ್ಘಾಟನಾ ಸಮಾರಂಭದ ಪ್ರಯುಕ್ತ ಕೆಬಿಜಿ ಸ್ವಯಂಸೇವಕರ ತಂಡದಿಂದ ಆಯೋಜಿಸಿರುವ ಎರಡು ದಿನಗಳ ಅಂತರ ಅಪಾರ್ಟ್‌ಮೆಂಟ್‌ ಕ್ರೀಡಾ ಉತ್ಸವಕ್ಕೂ ಅವರು ಶನಿವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಒಳಾಂಗಣ ಕ್ರೀಡಾಂಗಣದಲ್ಲಿ ಒಂದೇ ಸೂರಿನಡಿ ಈಜುಕೊಳ, ಜಿಮ್‌, ಟೇಕ್ವಾಂಡೊ, ಯೋಗ, ಏರೋಬಿಕ್ಸ್‌, ಬ್ಯಾಂಡ್ಮಿಂಟನ್‌, ಟೇಬಲ್‌ ಟೆನ್ನಿಸ್‌ ಮತ್ತಿತರ ಕ್ರೀಡೆಗಳ ತರಬೇತಿಗೆ ಆಧುನಿಕ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ADVERTISEMENT

‘ಖಾಸಗಿ ಕ್ರೀಡಾ ತಾಣಗಳಲ್ಲಿ ಸಾಕಷ್ಟು ಹಣ ವ್ಯಯಿಸಬೇಕಾಗಿದ್ದು, ಇಲ್ಲಿ ಕೈಗೆಟಕುವ ದರದಲ್ಲಿ ಸಾರ್ವಜನಿಕರಿಗೆ ಕ್ರೀಡೆಗಳ ಅಭ್ಯಾಸಕ್ಕೆ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಲಾಗಿದೆ’ ಎಂದರು.

‘ಇದೇ ಮಾದರಿಯಲ್ಲಿ ವಿದ್ಯಾರಣ್ಯಪುರ, ಸಹಕಾರನಗರ ಹಾಗೂ ನವರತ್ನ ಅಗ್ರಹಾರದಲ್ಲಿಯೂ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಜಕ್ಕೂರು ಸಮೀಪದಲ್ಲಿ 5ನೇ ಕ್ರೀಡಾಂಗಣ ಸಿದ್ಧವಾಗುತ್ತಿದೆ. ಯುವಜನರು, ಹಿರಿಯರು ಆರೋಗ್ಯವಾಗಿರಬೇಕಾದರೆ ದೈಹಿಕವಾಗಿ ಸದೃಢರಾಗಬೇಕಾಗಿದ್ದು, ಕ್ರೀಡಾಂಗಣ ಸೌಲಭ್ಯವನ್ನು ಉಪಯೋಗಿಸಬೇಕು’ ಎಂದು ಆಶಿಸಿದರು.

ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಕೃಷ್ಣ ಬೈರೇಗೌಡ, ಕಾಂಗ್ರೆಸ್‌ ಮುಖಂಡರಾದ ಎನ್‌.ಎನ್‌.ಶ್ರೀನಿವಾಸಯ್ಯ, ಎಂ.ಜಯಗೋಪಾಲಗೌಡ, ವಿ.ವಿ.ಪಾರ್ತಿಬರಾಜನ್‌, ವಿ.ಹರಿ, ಆರ್‌.ಎಂ. ಶ್ರೀನಿವಾಸ್‌, ಡಿ.ಬಿ.ಸುರೇಶ್‌ ಗೌಡ, ಕೆ.ಆರ್‌.ರಾಜು, ಎಚ್‌.ಎ.ಶಿವಕುಮಾರ್‌. ಕೆ.ದಿಲೀಪ್‌ಕುಮಾರ್‌, ಕೆಂಪಾಪುರ ರಮೇಶ್‌, ಕಾರ್ಣಿಕ್‌ ರಾಜ್‌ ಮತ್ತಿತರರು ಉಪಸ್ಥಿತರಿದ್ದರು.

400 ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಭಾಗಿ

ಅಪಾರ್ಟ್‌ಮೆಂಟ್‌ ಕ್ರೀಡಾ ಉತ್ಸವದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ 400 ಅಪಾರ್ಟ್‌ಮೆಂಟ್‌ಗಳ ಎರಡು ಸಾವಿರ ನಿವಾಸಿಗಳು ಕ್ರೀಡಾ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು. ಕೆಂಪಾಪುರದ ಕ್ರೀಡಾಂಗಣ ವಿದ್ಯಾರಣ್ಯಪುರ ಮತ್ತು ಸಹಕಾರನಗರದ ಒಳಾಂಗಣ ಕ್ರೀಡಾಂಗಣ ಹಾಗೂ ವಿವಿಧ ಮೈದಾನಗಳಲ್ಲಿ ಕ್ರೀಡೆಗಳು ನಡೆಯಲಿವೆ. ಕ್ರಿಕೆಟ್‌ ಬ್ಯಾಡ್ಮಿಂಟನ್‌ ಟೇಬಲ್‌ ಟೆನ್ನಿಸ್‌ ಈಜು ಫುಟ್‌ಬಾಲ್‌ ಬ್ಯಾಸ್ಕೆಟ್‌ ಬಾಲ್‌ ಕೇರಮ್‌ ಹಗ್ಗ-ಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.