ಬೆಂಗಳೂರು: ಪಕ್ಷದ ಕಾರ್ಯಕರ್ತರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿಲುವಿಗೆ ಹಲವು ಸಚಿವರು ಆಕ್ಷೇಪ ಎತ್ತಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ನಲ್ಲಿ ಮುಸುಕಿನ ಸಂಘರ್ಷ ಜೋರಾಗುವ ಲಕ್ಷಣ ಕಾಣಿಸುತ್ತಿದೆ.
34 ಮಂದಿ ಕಾರ್ಯಕರ್ತರಿಗೆ ಅಧಿಕಾರ ನೀಡುವ ಪಟ್ಟಿಯೊಂದಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೆಲವು ದಿನಗಳ ಹಿಂದೆ ಒಪ್ಪಿಗೆ ನೀಡಿದ್ದರು. ಈ ಪಟ್ಟಿ ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆ ಸಚಿವರು ತಗಾದೆ ತೆಗೆದಿದ್ದರು. ಅವರೊಂದಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಪ್ರಮುಖರೂ ದನಿಗೂಡಿಸಿದ್ದಾರೆ.
ವಿಧಾನ ಮಂಡಲ ಅಧಿವೇಶನದ ಮೊದಲ ದಿನವಾದ ಸೋಮವಾರ, ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಈ ಕುರಿತು ಬಿರುಸಿನ ಚರ್ಚೆ ನಡೆಯುತ್ತಿತ್ತು. ತಮ್ಮ ಅಭಿಪ್ರಾಯ ಆಲಿಸದೇ ಶಿವಕುಮಾರ್ ಅವರು ಏಕಪಕ್ಷೀಯವಾಗಿ ಪಟ್ಟಿ ಸಿದ್ಧಪಡಿಸಿದ್ದಾರೆ ಎಂಬ ಅಸಮಾಧಾನವನ್ನು ಶಾಸಕರು, ಸಚಿವರು ಹೊರ ಹಾಕುತ್ತಿದ್ದುದು ಕಂಡುಬಂತು.
ಸಿ.ಎಂ ಬಳಿ ದೂರು: ‘ಬಹುತೇಕ ಜಿಲ್ಲೆಗಳಲ್ಲಿ ಸಚಿವರ ಅಭಿಪ್ರಾಯ ಪಡೆಯದೇ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಹಲವು ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಪಟ್ಟಿಯ ಪ್ರಕಾರವೇ ಅಧಿಕಾರ ಹಂಚಿಕೆಯಾದರೆ ಪಕ್ಷ ಸಂಘಟನೆಗೆ ಹೊಡೆತ ಬೀಳುತ್ತದೆ ಎಂಬ ಅಭಿಪ್ರಾಯ ಹೇಳಿದ್ದಾರೆ’ ಎಂದು ಸಚಿವರೊಬ್ಬರು ತಿಳಿಸಿದರು.
ಶಾಸಕರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿರುವ ಕೆಲವು ಮುಖಂಡರು ತೀವ್ರ ಬೇಸರ ಹೊರ ಹಾಕಿದ್ದಾರೆ. ಬಯಲುಸೀಮೆಯ ಜಿಲ್ಲೆಯ ಕೆಲವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿಯೂ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ನಿಗಮ, ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ ಎಂದು ಹೇಳಿದರು.
ನಿಗಮ ಮಂಡಳಿಗಳಲ್ಲಿ ಅಧಿಕಾರ ನೀಡಲು ಗುರುತಿಸುವಾಗ ಕೆಲವೇ ಜಾತಿಯ ಕಾರ್ಯಕರ್ತರಿಗೆ ಆದ್ಯತೆ ನೀಡಿರುವ ಬಗ್ಗೆಯೂ ಸಚಿವರು, ಶಾಸಕರು ಸಿಟ್ಟು ಹೊರ ಹಾಕಿದ್ದಾರೆ. ಚಿಕ್ಕಮಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಒಂದೇ ಜಾತಿಯವರನ್ನು ಗುರುತಿಸಲಾಗಿದೆ. ಕಾಂಗ್ರೆಸ್ ಪರವಾಗಿ ಇರುವ ಸಮುದಾಯಗಳಿಗೆ ಒಂದು ಸ್ಥಾನ ಕೊಡುವ ಪ್ರಸ್ತಾವವೂ ಇಲ್ಲ. ಇದು ಪಕ್ಷ ಪ್ರತಿಪಾದಿಸುವ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು ಎಂದು ನಾಯಕರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವರು, ಶಾಸಕರು ಹೇಳುವ ಪ್ರಕಾರ, ವೇಣುಗೋಪಾಲ್ ಒಪ್ಪಿಗೆ ನೀಡಿರುವ ಪಟ್ಟಿಯಂತೆ ಆದೇಶ ಹೊರಡಿಸಿದರೆ ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ. ಈ ಕಾರಣಕ್ಕಾಗಿಯೇ ಲೋಕಸಭಾ ಚುನಾವಣೆಯವರೆಗೂ ಕಾರ್ಯಕರ್ತರಿಗೆ ಅಧಿಕಾರ ನೀಡುವ ಪ್ರಸ್ತಾವ ನನೆಗುದಿಗೆ ಬೀಳುವುದು ಬಹುತೇಕ ಖಚಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.