ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲರಹಟ್ಟಿಯ ಮನೆಯೊಂದರ ಎದುರು ನಿಲುಗಡೆ ಮಾಡಿದ್ದ ಕಾರನ್ನು ಹಿಂದಕ್ಕೆ ಚಾಲನೆ (ರಿವರ್ಸ್) ಮಾಡುವ ಸಂದರ್ಭದಲ್ಲಿ ಡಿಕ್ಕಿಯಾಗಿ 11 ತಿಂಗಳ ಮಗು ಮೃತಪಟ್ಟಿದೆ. ಸೋಮವಾರ ಬೆಳಿಗ್ಗೆ 9.45ರ ಸುಮಾರಿಗೆ ಘಟನೆ ನಡೆದಿದೆ.
ಗೊಲ್ಲರಹಟ್ಟಿ ನಿವಾಸಿ ಅಬ್ದುಲ್ಲಾ ಅವರ ಮಗು ಮಹಮ್ಮದ್ ಉಮರ್ ಫಾರೂಕ್ ಮೃತ ಮಗು. ಘಟನೆ ಸಂಬಂಧ ಕಾರು ಚಾಲಕ ಸ್ವಾಮಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸ್ವಾಮಿ ಅವರಿಗೆ ಸೇರಿದ ಮನೆಯಲ್ಲಿ ಅಬ್ದುಲ್ಲಾ ಅವರು ಬಾಡಿಗೆಗೆ ಇದ್ದಾರೆ. ಅಬ್ದುಲ್ಲಾ ಪತ್ನಿ ಮಗುವನ್ನು ಮನೆಯ ಎದುರು ಆಟವಾಡಲು ಬಿಟ್ಟು ಮನೆಯೊಳಗೆ ಕೆಲಸದಲ್ಲಿ ಮಗ್ನರಾಗಿದ್ದರು. ಆಗ ಮಗು ತೆವಳುತ್ತಾ ಕಾರಿನ ಬಳಿ ಹೋಯಿತು. ಕೆಲಸಕ್ಕೆ ಹೊರಟಿದ್ದ ಸ್ವಾಮಿ ಅವರು ಮಗುವನ್ನು ಗಮನಿಸದೆ ಕಾರು ಚಾಲನೆ ಮಾಡಿದರು. ಆಗ ಕಾರಿನ ಚಕ್ರ ಹರಿದು ಮಗು ಸ್ಥಳದಲ್ಲೇ ಮೃತಪಟ್ಟಿದೆ ಎಂದು ಪೊಲೀಸರು ಹೇಳಿದರು.
ಚಾಲಕ ಸ್ವಾಮಿಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಕಾರು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2023ರ ಡಿಸೆಂಬರ್‌ನಲ್ಲೂ ನಗರದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಕಸವನಹಳ್ಳಿಯಲ್ಲಿರುವ ಸಮೃದ್ಧಿ ಅಪಾರ್ಟ್‌ಮೆಂಟ್ ಸಮುಚ್ಚಯದ ಎದುರು ಕಾರಿನ ಚಕ್ರ ಮೈಮೇಲೆ ಹರಿದು ಮೂರು ವರ್ಷದ ಹೆಣ್ಣು ಮಗು ಅರ್ಬಿನಾ ಮೃತಪಟ್ಟಿತ್ತು. ಬೆಳ್ಳಂದೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಮಗು ಅರ್ಬಿನಾ, ಅಪಾರ್ಟ್‌ಮೆಂಟ್ ಸಮುಚ್ಚಯದ ಪ್ರವೇಶ ದ್ವಾರದಲ್ಲಿ ಆಟವಾಡುತ್ತಾ ಕುಳಿತಿತ್ತು. ಇದೇ ಸಂದರ್ಭದಲ್ಲಿ ಆರೋಪಿ ಚಾಲಕ ಸುಮನ್, ಪಾರ್ಕಿಂಗ್‌ನಲ್ಲಿದ್ದ ಕಾರು ಚಲಾಯಿಸಿಕೊಂಡು ರಸ್ತೆಯತ್ತ ಸಾಗಿದ್ದರು. ಪ್ರವೇಶ ದ್ವಾರದಲ್ಲಿದ್ದ ಮಗುವನ್ನು ಗಮನಿಸಿರಲಿಲ್ಲ. ಮಗುವಿನ ಮೇಲೆಯೇ ಕಾರಿನ ಚಕ್ರ ಹರಿದಿತ್ತು. ಸುಮನ್ ಸಹ ಸ್ಥಳದಿಂದ ಹೊರಟು ಹೋಗಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದಾಗ ಕಾರಿನ ಚಕ್ರ ಹರಿದು ಮಗು ಮೃತಪಟ್ಟಿದ್ದು ಗೊತ್ತಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.