ADVERTISEMENT

‘ಇನ್‌ಸೈಟ್ಸ್‌ ಐಎಎಸ್‌’ ಸಾಧನೆಗೆ ಮತ್ತೊಂದು ಯಶಸ್ಸಿನ ಕಿರೀಟ

40 ಅಭ್ಯರ್ಥಿಗಳ ಪೈಕಿ 27 ಮಂದಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 21:44 IST
Last Updated 4 ಆಗಸ್ಟ್ 2020, 21:44 IST
ಹೇಮಾ ನಾಯಕ್ 
ಹೇಮಾ ನಾಯಕ್    

ಬೆಂಗಳೂರು: ಯುಪಿಎಸ್‌ಸಿ ಪರೀಕ್ಷೆಗಳ 2019ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಮೊದಲ ಮೂರು ಸ್ಥಾನ ಪಡೆದಿರುವ ಅಭ್ಯರ್ಥಿಗಳೂ ಸೇರಿದಂತೆ, ಈ ಬಾರಿ ಉತ್ತಮ ರ‍್ಯಾಂಕಿಂಗ್‌ ಪಡೆದ 27 ಅಭ್ಯರ್ಥಿಗಳಿಗೆ ತರಬೇತಿ, ಮಾರ್ಗದರ್ಶನ ನೀಡಿರುವುದು ಬೆಂಗಳೂರಿನ ‘ಇನ್‌ಸೈಟ್ಸ್‌ ಐಎಎಸ್’‌ ಸಂಸ್ಥೆ.

‘ರಾಜ್ಯದಲ್ಲಿ 40 ಅಭ್ಯರ್ಥಿಗಳು ಈ ಬಾರಿ ಉತ್ತೀರ್ಣಗೊಂಡಿದ್ದರೆ, ಅದರಲ್ಲಿ ಅರ್ಧಕ್ಕೂ ಹೆಚ್ಚು ಅಭ್ಯರ್ಥಿಗಳು ನಮ್ಮಲ್ಲಿ ತರಬೇತಿ ಪಡೆದವರೇ ಆಗಿದ್ದಾರೆ’ ಎನ್ನುತ್ತಾರೆ ಇನ್‌ಸೈಟ್ಸ್‌ ಐಎಎಸ್‌ನ ಸ್ಥಾಪಕ ಮತ್ತು ನಿರ್ದೇಶಕ ಜಿ.ಬಿ. ವಿನಯ್‌ಕುಮಾರ್.

‘ಈ ವಿದ್ಯಾರ್ಥಿಗಳಲ್ಲಿ ಅನೇಕರು ಇನ್‌ಸೈಟ್ಸ್‌ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಲವರು ನೇರವಾಗಿ ಬೋಧನಾ ತರಗತಿಗಳಿಗೆ ಹಾಜರಾಗಿದ್ದರೆ, ಬಹಳಷ್ಟು ಅಭ್ಯರ್ಥಿಗಳು ಪೂರ್ವಭಾವಿ ಮತ್ತು ಮುಖ್ಯಪರೀಕ್ಷೆ ಮಾದರಿ ಪರೀಕ್ಷೆ ತೆಗೆದುಕೊಂಡಿದ್ದರು. ಅಣಕು ಸಂದರ್ಶನದಲ್ಲಿಯೂ ಪಾಲ್ಗೊಂಡಿದ್ದರು’ ಎಂದು ತಿಳಿಸಿದರು.

ADVERTISEMENT

‘ತರಗತಿ ಬೋಧನೆ ಸೇರಿದಂತೆ ಎಲ್ಲ ಬಗೆಯ ತರಬೇತಿ ಕಾರ್ಯಕ್ರಮ ತೆಗೆದುಕೊಂಡಿದ್ದೆ. ಜಿ.ಬಿ. ವಿನಯ್‌ಕುಮಾರ್‌ ಅವರ ಮಾರ್ಗದರ್ಶನ ಪಡೆದಿದ್ದೆ. ನನ್ನ ಯಶಸ್ಸಿನಲ್ಲಿ ಇನ್‌ಸೈಟ್ಸ್‌ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ’ ಎಂದು ಹೇಳುತ್ತಾರೆ, ಅಖಿಲ ಭಾರತ ಮಟ್ಟದಲ್ಲಿ 5ನೇ ರ‍್ಯಾಂಕ್‌ ಮತ್ತು ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿರುವ ಸಿ.ಎಸ್. ಜಯದೇವ್.

‘ಸಂಸ್ಥೆಯಲ್ಲಿ ನನಗೆ ನೀಡಿದ ಎಲ್ಲ ಸಲಹೆಯನ್ನೂ ಪಾಲಿಸಿದೆ’ ಎಂದು ಅವರು ಹೇಳುತ್ತಾರೆ.

‘ಕಳೆದ ವರ್ಷವೇ ನಾನು ಆಯ್ಕೆಯಾಗಿದ್ದರೂ, ರ‍್ಯಾಂಕಿಂಗ್‌ ಉತ್ತಮಪಡಿಸಿಕೊಳ್ಳುವ ಉದ್ದೇಶದಿಂದ ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದೆ. ಇನ್‌ಸೈಟ್ಸ್‌ ವಿನಯಕುಮಾರ್‌ ಅವರು ನನಗೆ ಮಾರ್ಗದರ್ಶನ ನೀಡಿದರು. ಸಂಸ್ಥೆಯಲ್ಲಿ ನಡೆದ ಆನ್‌ಲೈನ್‌ ಟೆಸ್ಟ್‌ಗಳನ್ನು ತೆಗೆದುಕೊಂಡಿದ್ದೆ. ಈ ಬಾರಿ ಉತ್ತಮ ರ‍್ಯಾಂಕ್‌ ಲಭಿಸಿದ್ದು ಸಂತಸ ತಂದಿದೆ’ ಎನ್ನುತ್ತಾರೆ 71ನೇ ರ‍್ಯಾಂಕ್‌ ಪಡೆದಿರುವ ಬಿ. ಯಶಸ್ವಿನಿ.

ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿರುವ ವಿನೋದ್‌ಕುಮಾರ್‌ ಕೂಡ, ‘ಇನ್‌ಸೈಟ್ಸ್ ‌ಐಎಎಸ್‌ ಸಂಸ್ಥೆಯಲ್ಲಿ ಅಣಕು ಪರೀಕ್ಷೆಗಳನ್ನು ಬರೆದಿದ್ದು ನೆರವಾಯಿತು’ ಎಂದು ಹೇಳಿದರು.

‘297ನೇ ರ‍್ಯಾಂಕ್ ಪಡೆದಿರುವ ಕೃತಿ ಭಟ್ ನಮ್ಮಲ್ಲಿಯೇ ಅಣಕು ಪರೀಕ್ಷೆ ತೆಗೆದುಕೊಂಡಿದ್ದರು. 167ನೇ ರ್‍ಯಾಂಕ್‌ ಪಡೆದಿರುವ ಎಚ್.ಎಸ್. ಕೀರ್ತನಾ, 225ನೇ ರ‍್ಯಾಂಕ್‌ ಪಡೆದಿರುವ ಹೇಮಾ ನಾಯಕ್‌ ಕೂಡ ನಮ್ಮಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದವರು ಯುಪಿಎಸ್‌ಸಿಯಲ್ಲಿ ರ್‍ಯಾಂಕ್‌ ಪಡೆಯುತ್ತಿರುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಹೆಮ್ಮೆ ತಂದಿದೆ’ ಎಂದು ವಿನಯ್‌ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.