ADVERTISEMENT

₹ 10.96 ಲಕ್ಷ ಕಿತ್ತ ‘ಇನ್‌ಸ್ಟಾಗ್ರಾಂ’ ಗೆಳೆಯ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 21:05 IST
Last Updated 14 ಡಿಸೆಂಬರ್ 2019, 21:05 IST

ಬೆಂಗಳೂರು: ‘ಇನ್‌ಸ್ಟಾಗ್ರಾಂ’ ಮೊಬೈಲ್ ಆ್ಯಪ್‌ನಲ್ಲಿ ಪರಿಚಯವಾಗಿದ್ದ ಡೇನಿಯಲ್ ಎಂಬಾತ ಉಡುಗೊರೆ ಆಮಿಷವೊಡ್ಡಿ ನಗರದ ಮಹಿಳೆಯೊಬ್ಬರಿಂದ ₹10.96 ಲಕ್ಷ ಪಡೆದುಕೊಂಡು ವಂಚಿಸಿದ್ದು, ಈ ಸಂಬಂಧ ಭಾರತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸ್ಥಳೀಯ ನಿವಾಸಿ ಆಗಿರುವ 46 ವರ್ಷದ ಮಹಿಳೆ ದೂರು ನೀಡಿದ್ದಾರೆ. ವಂಚನೆ (ಐಪಿಸಿ 420) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಹಿಳೆಯು‘ಇನ್‌ಸ್ಟಾಗ್ರಾಂ’ ಮೊಬೈಲ್ ಆ್ಯಪ್‌ನಲ್ಲಿ ಖಾತೆ ಹೊಂದಿದ್ದಾರೆ. ಅವರಿಗೆ ನವೆಂಬರ್‌ನಲ್ಲಿ ಆರೋಪಿ ಡೇನಿಯಲ್ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನು ಸ್ವೀಕರಿಸಿದ್ದ ಮಹಿಳೆ ಚಾಟಿಂಗ್ ಮಾಡಲಾರಂಭಿಸಿದ್ದರು. ಮೊಬೈಲ್ ನಂಬರ್ ಸಹ ವಿನಿಮಯ ಮಾಡಿಕೊಂಡಿದ್ದರು.’

ADVERTISEMENT

‘ಲಂಡನ್‌ನಲ್ಲಿ ವಾಸವಿರುವುದಾಗಿ ಹೇಳಿದ್ದ ಆರೋಪಿ ಬೆಲೆಬಾಳುವ ಚಿನ್ನಾಭರಣವನ್ನು ಉಡುಗೊರೆಯಾಗಿ ಕಳುಹಿಸುವುದಾಗಿ ತಿಳಿಸಿದ್ದ. ಚಿನ್ನಾಭರಣವಿದ್ದ ಬಾಕ್ಸ್‌ನ ಫೋಟೊ ತೆಗೆದು ವಾಟ್ಸ್‌ಆ್ಯಪ್‌ನಲ್ಲಿ ಮಹಿಳೆಗೆ ಕಳುಹಿಸಿದ್ದ’ ಎಂದು ಪೊಲೀಸರು ತಿಳಿಸಿದರು.

‘ಮರುದಿನವೇ ಮಹಿಳೆಗೆ ಕರೆ ಮಾಡಿದ್ದ ಅಪರಿಚಿತ ತಾನೊಬ್ಬ ದೆಹಲಿಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಉಡುಗೊರೆಯನ್ನು ನಿಲ್ದಾಣದಿಂದ ಕಳುಹಿಸಬೇಕಾದರೆ ₹55,000 ಶುಲ್ಕ ತುಂಬುವಂತೆ ಹೇಳಿದ್ದ. ಅದನ್ನು ನಂಬಿದ್ದ ಮಹಿಳೆ ಗಂಡನ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದಳು.’

‘ಪುನಃ ಮಹಿಳೆಗೆ ಕರೆ ಮಾಡಿದ್ದ ಆರೋಪಿ, ‘ಉಡುಗೊರೆಯ ಬಾಕ್ಸ್‌ನಲ್ಲಿ 17 ಕೆ.ಜಿ ತೂಕದ ಚಿನ್ನಾಭರಣ ಇದೆ. ಕಸ್ಟಮ್ಸ್ ಶುಲ್ಕ ಪಾವತಿಸಿದರೆ ಮಾತ್ರ ನಿಮ್ಮ ವಿಳಾಸಕ್ಕೆ ಕಳುಹಿಸುತ್ತೇವೆ’ ಎಂದಿದ್ದ. ಅದನ್ನೂ ನಂಬಿದ್ದ ಮಹಿಳೆ ಆರೋಪಿ ಸೂಚಿಸಿದ್ದ ಖಾತೆಗಳಿಗೆ ಹಂತ ಹಂತವಾಗಿ ₹10.96 ಲಕ್ಷ ಜಮೆ ಮಾಡಿದ್ದರು. ಅದಾದ ನಂತರ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.