ADVERTISEMENT

ಎಲ್ಲ ಗ್ರಾಪಂ ಕಚೇರಿಗಳ ಕಟ್ಟಡಗಳಿಗೆ ಸೌರಶಕ್ತಿ ಅಳವಡಿಕೆ: ಸಚಿವ ಈಶ್ವರಪ್ಪ

‘ಕ್ಯಾಚ್ ದ ರೈನ್’ ಯೋಜನೆಗೆ ಹುಬ್ಬಳ್ಳಿಯಲ್ಲಿ 9ರಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 11:44 IST
Last Updated 7 ಏಪ್ರಿಲ್ 2021, 11:44 IST
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ   

ಬೆಂಗಳೂರು: ‘ವ್ಯರ್ಥವಾಗುವ ಮಳೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ‘ಕ್ಯಾಚ್ ದ ರೈನ್’ (ಜಲಶಕ್ತಿ) ವಿನೂತನ ಯೋಜನೆಯನ್ನು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಜಾರಿ ಮಾಡಲಾಗುತ್ತಿದೆ. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ನರೇಂದ್ರ ಶರ್ಮ ಅವರು ಇದೇ 9ರಂದು ಹುಬ್ಬಳ್ಳಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಈ ಯೋಜನೆಯಲ್ಲಿ ಕೆರೆಕಟ್ಟೆಗಳು, ಹಳ್ಳಕೊಳ್ಳಗಳು, ಚೆಕ್‍ಡ್ಯಾಂ, ಬೋರ್‌ವೆಲ್‌ ಸೇರಿದಂತೆ ಮತ್ತಿತರ ಕಡೆ ಇಂಗು ಗುಂಡಿಗಳ ಮೂಲಕ ಮಳೆ ನೀರು ಸಂಗ್ರಹಿಸಲಾಗುವುದು. ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರೇ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ’ ಎಂದು ಹೇಳಿದರು.

‘100 ದಿನದಲ್ಲಿ ಎಲ್ಲ ಕ್ಷೇತ್ರಗಳಿಗೂ ಯೋಜನೆ ತಲುಪಬೇಕೆಂದು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಜೂನ್, ಜುಲೈ ತಿಂಗಳಲ್ಲಿ ಮಳೆಗಾಲ ಆರಂಭ ಆಗುವುದರಿಂದ ಆ ಸಂದರ್ಭದಲ್ಲಿ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಹೀಗಾಗಿ, ಎಷ್ಟು ಸಾಧ್ಯವೋ ಅಷ್ಟು ಬೇಗ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ’ ಎಂದರು.

ADVERTISEMENT

‘ಜಲ್ ಜೀವನ್ ಮಿಷನ್ ಯೋಜನೆಯಡಿ 2023ರೊಳಗೆ ರಾಜ್ಯದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ಗುರಿ ಪೂರ್ಣಗೊಳಿಸಬೇಕಿದೆ. 2022ರ ಅಂತ್ಯಕ್ಕೆ ಯೋಜನೆಯನ್ನು ಮುಗಿಸಬೇಕಿತ್ತು. ಆದರೆ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಮತ್ತಿತರ ಕಡೆ ಶಾಶ್ವತ ಕುಡಿಯುವ ನೀರು ಒದಗಿಸಲು ನದಿಮೂಲಗಳಿಲ್ಲ. ಹೀಗಾಗಿ, ಸಮಯಾವಕಾಶ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ’ ಎಂದರು.

‘ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿ ಕಚೇರಿಗಳ ಕಟ್ಟಡಗಳಿಗೆ ಸೌರಶಕ್ತಿ ಅಳವಡಿಸಲು ಉದ್ದೇಶಿಸಲಾಗಿದೆ. ಸದ್ಯ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕೊರತೆಯಿಂದ ಅರ್ಜಿದಾರರು ವಾರಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇದೆ. ಸೋಲಾರ್ ಅಳವಡಿಸಿದರೆ ಬೆಳಿಗ್ಗೆ ಅರ್ಜಿ ಸಲ್ಲಿಸಿದರೆ ಒಂದೇ ದಿನದಲ್ಲಿ ದಾಖಲೆಗಳನ್ನು ಪಡೆಯಲು ಅನುಕೂಲವಾಗಲಿದೆ. ಸೋಲಾರ್ ಅಳವಡಿಸುವ ಕಾರ್ಯವನ್ನು ದೇಶದ ಅತ್ಯಂತ ಅನುಭವ ಇರುವ ಸಂಸ್ಥೆಗೆ ವಹಿಸಲಾಗುವುದು. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ’ ಎಂದರು.

‘ಹೊಸದಾಗಿ ಆಯ್ಕೆಯಾದ 90,729 ಗ್ರಾಮ ಪಂಚಾಯ್ತಿ ಸದಸ್ಯರಿಗೆ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೂಲಕ ತರಬೇತಿ ನೀಡಲಾಗುವುದು. ಒಟ್ಟು 285 ಕೇಂದ್ರಗಳಲ್ಲಿ 5 ದಿನಗಳ ತರಬೇತಿ ವ್ಯವಸ್ಥೆ ಮಾಡಲಾಗಿದ್ದು, ಮೇ 15ರೊಳಗೆ ಎಲ್ಲ ಸದಸ್ಯರಿಗೂ ತರಬೇತಿ ನೀಡಲಾಗುವುದು’ ಎಂದು ಅವರು ವಿವರಿಸಿದರು.

‘ನರೇಗಾ (ಉದ್ಯೋಗ ಖಾತ್ರಿ) ಯೋಜನೆಯಡಿ 2019-20ರಲ್ಲಿ 13 ಕೋಟಿ ಮಾನವ ದಿನಗಳ ಗುರಿ ನೀಡಲಾಗಿತ್ತು. ಗುರಿ ಮೀರಿ 15 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 38ರಷ್ಟು ಹೆಚ್ಚಳವಾಗಿದೆ. ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ 3,336 ಕಿ.ಮೀ ಉದ್ದ ರಸ್ತೆ ಹಾಗೂ 26 ಸೇತುವೆ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಗ್ರಾಮ ವಿಕಾಸ್ ಯೋಜನೆಯಡಿ ₹ 1,000 ಕೋಟಿ ವೆಚ್ಚದಲ್ಲಿ 970 ಗ್ರಾಮಗಳ ಅಭಿವೃದ್ಧಿ, ಮನೆ ಮನೆ ಗಂಗೆ ಯೋಜನೆಯಡಿ 3.75 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲಿಸಿದ್ದೇವೆ’ ಎಂದು ತಿಳಿಸಿದರು.

‘ನನೆಗುದಿಗೆ ಬಿದ್ದಿರುವ ಕಡತಗಳ ವಿಲೇವಾರಿಗೂ ಆದ್ಯತೆ ನೀಡಲಾಗಿದೆ. ಕೇವಲ ಎರಡೂವರೆ ವರ್ಷದಲ್ಲಿ 11,409 ಕಡತಗಳನ್ನು ವಿಲೇವಾರಿ ಮಾಡಿದ್ದೇವೆ. ಸದ್ಯ 1,632 ಕಡತಗಳು ಮಾತ್ರ ಬಾಕಿ ಇವೆ. 43 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಲಾಗಿದ್ದು, 15,656 ವಿವಿಧ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಸ್ವಚ್ಛ ಭಾರತ್ ಮಿಷನ್‍ನಡಿ 2019-20ರಲ್ಲಿ 2,63,340 ವೈಯಕ್ತಿಕ ಶೌಚಾಲಯಗಳು ಹಾಗೂ 245 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 2020-21ರಲ್ಲಿ 2,14,093 ವೈಯಕ್ತಿಕ ಶೌಚಾಲಯಗಳು, 86 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.