ADVERTISEMENT

ಯಲಹಂಕ: ಅಂತರ ಅಪಾರ್ಟ್‌ಮೆಂಟ್‌ ಕ್ರೀಡಾ ಉತ್ಸವ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 22:04 IST
Last Updated 15 ನವೆಂಬರ್ 2025, 22:04 IST
ವಿಜೇತ ಮಹಿಳಾ ಕ್ರಿಕೆಟ್‌ ತಂಡದ ಸದಸ್ಯರನ್ನು ಸಚಿವ ಕೃಷ್ಣಬೈರೇಗೌಡ ಅಭಿನಂದಿಸಿದರು
ವಿಜೇತ ಮಹಿಳಾ ಕ್ರಿಕೆಟ್‌ ತಂಡದ ಸದಸ್ಯರನ್ನು ಸಚಿವ ಕೃಷ್ಣಬೈರೇಗೌಡ ಅಭಿನಂದಿಸಿದರು   

ಯಲಹಂಕ: ಕಾಂಗ್ರೆಸ್‌ ತಂಡ, ಯುವ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಕೆಬಿಜಿ ಸ್ವಯಂ ಸೇವಕರ ಸಂಘದ ಆಶ್ರಯದಲ್ಲಿ ಬ್ಯಾಟರಾಯನಪುರ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಆಯೋಜಿಸಿದ್ದ 3ನೇ ವಾರ್ಷಿಕ ‘ಇಂಟರ್ ಅಪಾರ್ಟ್‌ಮೆಂಟ್‌ ಸ್ಪೋರ್ಟ್ಸ್ ಫೆಸ್ಟ್-2025ʼ ಅನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸಿದರು.  

ನಂತರ ಮಾತನಾಡಿದ ಅವರು, ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವಾರು ಅಪಾರ್ಟ್‌ಮೆಂಟ್‌ಗಳಿದ್ದು, ಇಲ್ಲಿನ ನಿವಾಸಿಗಳಿಗೆ ಸುತ್ತಮುತ್ತಲ ಬಡಾವಣೆಗಳ ಜನರ ಸಂಪರ್ಕವೇ ಇರುವುದಿಲ್ಲ. ಈ ದಿಸೆಯಲ್ಲಿ ಇವರಿಬ್ಬರ ನಡುವೆ ಸೌಹಾರ್ದ ಸಂಬಂಧವನ್ನು ಗಟ್ಟಿಗೊಳಿಸುವ ಸಲುವಾಗಿ ಕ್ರೀಡಾ ಉತ್ಸವ ಆಯೋಜಿಸಲಾಗಿದೆ ಎಂದರು.

ಕ್ಷೇತ್ರ ವ್ಯಾಪ್ತಿಯಲ್ಲಿ ನಾಲ್ಕು ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದ್ದು, ಜಕ್ಕೂರು ಸಮೀಪದ ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ ಮತ್ತೊಂದು ಒಳಾಂಗಣ ಕ್ರೀಡಾಂಗಣ ನಿರ್ಮಾಣ ಪ್ರಗತಿಯಲ್ಲಿದೆ. ಈ ಸೌಲಭ್ಯಗಳ ಕುರಿತು ಜನರಿಗೆ ಮಾಹಿತಿ ನೀಡುವುದರ ಜೊತೆಗೆ ಕ್ರೀಡೆಗಳಲ್ಲಿ ಪಾಲ್ಗೊಂಡು, ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಬೇಕು. ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕೆಂಬ ಉದ್ದೇಶದಿಂದ ಪ್ರತಿವರ್ಷ ಕ್ರೀಡಾ ಉತ್ಸವ ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು

ADVERTISEMENT

ಸಂಘಟಕಿ ಮೀನಾಕ್ಷಿ ಶೇಷಾದ್ರಿ ಮಾತನಾಡಿ, ಕ್ರಿಕೆಟ್, ವಾಲಿಬಾಲ್, ಫುಟ್‌ಬಾಲ್, ಚೆಸ್, ಕೇರಮ್, ಟೆಬಲ್ ಟೆನಿಸ್, ಹಗ್ಗ-ಜಗ್ಗಾಟ, ಬ್ಯಾಡ್ಮಿಂಟನ್ ಸೇರಿ ಒಟ್ಟು 14 ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, 3600 ಜನರು ಭಾಗವಹಿಸಿದ್ದಾರೆ ಎಂದರು.

ಲೀಗ್‌ ಹಂತದ ಪಂದ್ಯಗಳು ಮುಗಿದಿದ್ದು, ಭಾನುವಾರ ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಗಳು ನಡೆಯಲಿವೆ. ಸಂಜೆ 4 ಗಂಟೆಗೆ ಸಂಗೀತ ಕಾರ್ಯಕ್ರಮದ ನಂತರ ವಿಜೇತರಿಗೆ ಆಕರ್ಷಕ ಟ್ರೋಫಿ, ನಗದು ಹಾಗೂ ಎಲ್ಲ ಸ್ಪರ್ಧಿಗಳಿಗೆ ಪ್ರಮಾಣಪತ್ರ ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಕಾಂಗ್ರೆಸ್‌ ಮುಖಂಡರಾದ ಎನ್‌.ಎನ್‌.ಶ್ರೀನಿವಾಸಯ್ಯ, ಎಂ.ಜಯಗೋಪಾಲಗೌಡ, ಪಾರ್ತಿಬರಾಜನ್‌, ವಿ.ಹರಿ, ಎಚ್‌.ಎ.ಶಿವಕುಮಾರ್‌, ಹನುಮಂತಿ, ಕೆ.ದಿಲೀಪ್‌ಕುಮಾರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.