ಬೆಂಗಳೂರು: ಒಳಮೀಸಲಾತಿ ಜಾರಿಗೊಳಿಸಿದ್ದಕ್ಕಾಗಿ ಕಾವೇರಿ ನಿವಾಸದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೃಹತ್ ಭಾವಚಿತ್ರಕ್ಕೆ ಮಾಜಿ ಸಚಿವ ಎಚ್. ಆಂಜನೇಯ ನೇತೃತ್ವದಲ್ಲಿ ಹೂವಿನ ಸುರಿಮಳೆ, ಹಾಲಿನ ಅಭಿಷೇಕ ಮಾಡಲಾಯಿತು.
ಬಳಿಕ ಕಾವೇರಿ ನಿವಾಸದ ಒಳಗೆ ಮುಖ್ಯಮಂತ್ರಿಯವರಿಗೆ ಬೃಹತ್ ಹಾರ ಹಾಕಿ ಅಭಿನಂದಿಸಲಾಯಿತು.
ಪರಿಶಿಷ್ಟ ಜಾತಿಯೊಳಗಿನ ಬಲಾಢ್ಯ ಸಮುದಾಯಗಳ ನಡುವೆ ಸರ್ಕಾರಿ ಸೌಲಭ್ಯ, ಉನ್ನತ ಶಿಕ್ಷಣ, ಉದ್ಯೋಗ ಪಡೆಯುವುದು ಮಾದಿಗ ಹಾಗೂ ಸಂಬಂಧಿತ ಸಮುದಾಯಗಳಿಗೆ ಸವಾಲಾಗಿತ್ತು. ಪೌರಕಾರ್ಮಿಕ, ಸಫಾಯಿ ಕರ್ಮಚಾರಿ ನೌಕರಿ ಪಡೆಯಲಷ್ಟೇ ಸೀಮಿತರಾಗಿದ್ದರು. ಇದನ್ನು ಸರ್ಕಾರ ಮತ್ತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಒಳಮೀಸಲಾತಿ ಹಂಚಿಕೆಯ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೀಡಿತ್ತು. ಸಿದ್ದರಾಮಯ್ಯ ಕಾಳಜಿ ವಹಿಸಿ ಗಟ್ಟಿ ನಿರ್ಧಾರ ಕೈಗೊಂಡಿದ್ದರಿಂದ ಮಾದಿಗರು ಸಂಭ್ರಮಿಸುವಂತಾಗಿದೆ ಎಂದು ಎಚ್. ಆಂಜನೇಯ ತಿಳಿಸಿದರು.
‘ನ್ಯಾ.ನಾಗಮೋಹನ ದಾಸ್ ಆಯೋಗ ವರದಿ ಸಲ್ಲಿಸಿದ ಬಳಿಕ ಒಳಮೀಸಲಾತಿ ಜಾರಿ ಆಗದಂತೆ ಅನೇಕ
ಶಕ್ತಿಗಳು ಅಡ್ಡಗಾಲು ಹಾಕಿದವು. ಆದರೂ, ಭರವಸೆ ನೀಡಿದಂತೆ ಮಾದಿಗ ಸಮುದಾಯಕ್ಕೆ ಶೇ 6ರಷ್ಟು ಮೀಸಲಾತಿ ಒದಗಿಸಿದ್ದೀರಿ’ ಎಂದು ಶ್ಲಾಘಿಸಿದರು.
ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕ ಗುಂಪುಗಳನ್ನಾಗಿಸಿ ಶೇ 1ರಷ್ಟು ಮೀಸಲಾತಿಯನ್ನು ಆಯೋಗ ಕಲ್ಪಿಸಿತ್ತು. ಆಂಧ್ರಪ್ರದೇಶ, ತೆಲಂಗಾಣದಲ್ಲಿ ಇದೇ ನೀತಿ ಅನುಸರಿಸಲಾಗಿತ್ತು. ಇದನ್ನು ಕೈಬಿಟ್ಟು ಬೇರೆ ವರ್ಗದಲ್ಲಿ ಸೇರಿಸಿರುವುದು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ಈ ಸಂಬಂಧ ಅಲೆಮಾರಿ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಕೀಲ ರವೀಂದ್ರ, ಮುಖಂಡರಾದ ಕೊಪ್ಪಳದ ಗುಳೇಪ್ಪ, ಕಲಬುರಗಿಯ ಶ್ಯಾಮ್ ನಾಟಿಕೇರ್, ಬೀದರ್‌ನ ಚಂದ್ರಕಾಂತ್ ಇಪ್ಪಾಳ್ಗ, ಹೊಸಕೋಟೆ ಸುಬ್ಬಣ್ಣ, ಮಹದೇವಪುರದ ಚಿಮ್ಮಿ, ಹಾಸನದ ಶಂಕರ್‌ರಾಜ್, ಚಿತ್ರದುರ್ಗ ಶರಣಪ್ಪ, ನರಸಿಂಹರಾಜ್, ಮಾಗಡಿ ಮಂಜೇಶ್, ಬೆಂಗಳೂರಿನ ಮುತ್ತುರಾಜ್, ರಾಯಚೂರಿನ ಶರಣು ಭಾಗವಹಿಸಿದ್ದರು.
ತಾರ್ಕಿಕ ಅಂತ್ಯ: ಒಕ್ಕೂಟ
ಒಳಮೀಸಲಾತಿ ಜಾರಿಗೊಳಿಸುವ ಮೂಲಕ 35 ವರ್ಷಗಳ ಹೋರಾಟವು ತಾರ್ಕಿಕ ಅಂತ್ಯ ಮುಟ್ಟಿದ್ದು ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ ಎತ್ತಿ ಹಿಡಿದ್ದಾರೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಅಭಿಪ್ರಾಯ ವ್ಯಕ್ತಪಡಿಸಿದೆ. ಅತಿ ಹಿಂದುಳಿದಿರುವ ಅಲೆಮಾರಿ ಸಮುದಾಯಗಳನ್ನು ಸ್ಪರ್ಶ ಬಲಾಢ್ಯ ಸಮುದಾಯಗಳ ಗುಂಪಿಗೆ ಸೇರಿಸಿರುವುದು ಅನ್ಯಾಯ. ತಬ್ಬಲಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ 1ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಒಕ್ಕೂಟದ ಎಸ್. ಮಾರಪ್ಪ ಅಂಬಣ್ಣ ಅರೋಲಿಕರ ಬಸವರಾಜ ಕೌತಾಳ್ ಶಿವರಾಯ ಅಕ್ಕರಕಿ ಜೇಬಿ ರಾಜು ಹೆಣ್ಣೂರು ಶ್ರೀನಿವಾಸ್ ಕರಿಯಪ್ಪ ಗುಡಿಮನಿ ಇನ್ನಿತರರು ಆಗ್ರಹಿಸಿದ್ದಾರೆ.
ಒಳಮೀಸಲಾತಿ ನ್ಯಾಯಬದ್ಧ ಸೂತ್ರ: ಡಿಎಸ್‌ಎಸ್
ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ನಾಗಮೋಹನದಾಸ್ ವರದಿಯಲ್ಲಿದ್ದ ನ್ಯೂನತೆ ಸರಿಪಡಿಸಿ ಪರಿಷ್ಕರಿಸಿ ನ್ಯಾಯಬದ್ಧವಾಗಿ ಸರ್ಕಾರ ಜಾರಿಗೆ ತಂದಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ತಿಳಿಸಿದೆ. ಹಲವು ದಶಕದಿಂದ ನನೆಗುದಿಗೆ ಬಿದ್ದಿದ್ದ ಒಳಮೀಸಲಾತಿ ಹಂಚಿಕೆಯ ವಿಚಾರವನ್ನು ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಸಮರ್ಪಕವಾಗಿ ಬಗೆಹರಿಸಿದ್ದಾರೆ ಎಂದು ಹೇಳಿದೆ. ಮೂರು ಗುಂಪುಗಳಲ್ಲಿ ಹಂಚಿಹೋಗಿರುವ ಸೂಕ್ಷ್ಮ ಅತಿ ಸೂಕ್ಷ್ಮ ಅಲೆಮಾರಿ ಮತ್ತು ಅರೆ ಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯಗಳು ಪ್ರಬಲ ಸಮುದಾಯಗಳೊಂದಿಗೆ ಸೆಣಸಲಾರದೆ ಅವಕಾಶ ವಂಚಿತರಾಗುವ ಅಪಾಯ ಎದುರಾಗಿದೆ. ಅಲೆಮಾರಿಗಳು ಎದುರಿಸುತ್ತಿರುವ ಬೇರೆ ಬೇರೆ ಸಮಸ್ಯೆಗಳ ನಿವಾರಣೆಗಾಗಿ ಆಯೋಗ ರಚಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಸಂಘಟನಾ ಸಂಚಾಲಕರಾದ ಇಂದೂಧರ ಹೊನ್ನಾಪುರ ಮರಿಯಪ್ಪ ಹಳ್ಳಿ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.