ಹೆಸರಘಟ್ಟ: ಇಲ್ಲಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ(ಐಐಎಚ್‌ಆರ್) ಆವರಣದಲ್ಲಿ ಇದೇ 27ರಿಂದ ಮಾರ್ಚ್ 1ರವರೆಗೆ ‘ಅಂತರರಾಷ್ಟ್ರೀಯ ತೋಟಗಾರಿಕೆ ಮೇಳ 2025’ ಆಯೋಜಿಸಲಾಗಿದೆ.
ಹೊಸ ತಳಿಗಳು, ನೂತನ ತಂತ್ರಜ್ಞಾನ, ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಸೇರಿದಂತೆ ತೋಟಗಾರಿಕೆ ಕ್ಷೇತ್ರದ ಹಲವು ಸಂಶೋಧನೆಗಳು ಮೇಳದಲ್ಲಿ ಅನಾವರಣಗೊಳ್ಳಲಿವೆ.
‘ವಿಕಸಿತ ಭಾರತಕ್ಕಾಗಿ ತೋಟಗಾರಿಕೆ – ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ’ ಶೀರ್ಷಿಕೆ ಅಡಿಯಲ್ಲಿ ಈ ಬಾರಿಯ ಮೇಳವನ್ನು ಆಯೋಜಿಸುತ್ತಿದೆ’ ಎಂದು ಐಐಎಚ್ಆರ್ ನಿರ್ದೇಶಕ ತುಷಾರ್ ಕಾಂತಿ ಬೆಹೆರಾ ತಿಳಿಸಿದರು.
ಉತ್ತಮ ಪೌಷ್ಟಿಕಾಂಶಯುತ್ತ ಬೆಳೆ ಬೆಳೆಯುವ ತಂತ್ರಜ್ಞಾನಗಳನ್ನು ಮೇಳದಲ್ಲಿ ಪರಿಚಯಿಸಲಾಗುತ್ತದ ಎಂದು ಅವರು ವಿವರಿಸಿದರು.
250 ಮಳಿಗೆಗಳು: ಮೇಳದಲ್ಲಿ 250ಕ್ಕೂ ಹೆಚ್ಚು ಸಂಸ್ಥೆಗಳು ಪಾಲ್ಗೊಳ್ಳಲಿವೆ. 190ಕ್ಕೂ ಹೆಚ್ಚು ವೈವಿಧ್ಯಮಯ ಮಳಿಗೆಗಳಿರುತ್ತವೆ. 75,000ಕ್ಕೂ ಹೆಚ್ಚಿನ ರೈತರು ಮತ್ತು ತೋಟಗಾರಿಕಾ ಕ್ಷೇತ್ರದ ಇತರೆ ಭಾಗಿದಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೇಳದ ಆಯೋಜನ ಕಾರ್ಯದರ್ಶಿ ಶಂಕರ್ ಹೆಬ್ಬಾರ್ ತಿಳಿಸಿದರು.
‘20 ರಾಜ್ಯಗಳಿಂದ ರೈತರು ಪಾಲ್ಗೊಳ್ಳಲಿದ್ದಾರೆ. ನಮ್ಮ ರಾಜ್ಯದ 30 ಜಿಲ್ಲೆಗಳಿಂದಲೂ ರೈತರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಹೊರ ರಾಜ್ಯದ ರೈತರಿಗೆ ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಮಳಿಗೆಗಳಲ್ಲಿ ಸಸಿಗಳು ಮತ್ತು ಬೀಜಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ’ ಎಂದು ಮೇಳದ ಪ್ರಚಾರ ಸಮಿತಿ ಅಧ್ಯಕ್ಷ ನಂದೀಶ್ ಪಿ ತಿಳಿಸಿದರು.
ಬಿಡುಗಡೆಯಾಗುವ ಹೊಸ ತಳಿಗಳು
ಸಮೃದ್ಧಿ ಕಲ್ಲಂಗಡಿ ಸೆಲೆಕ್ಷನ್–4
ಅಂಟುಕಾಂಡ ಕೊಳೆರೋಗ ನಿರೋಧಕ ಸೋರೆಕಾಯಿ
ಎಲೆ ಸುರುಳಿ ನಂಜಾಣು ರೋಗ ನಿರೋಧಕ ಮೆಣಸಿನಕಾಯಿ
ಅವಕಾಡೊ (ಬೆಣ್ಣೆ ಹಣ್ಣು)
ಜಾವಾ ರೋಸ್ ಆಪಲ್
ಅರ್ಕ ಹಲಸಿನಕಾಯಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.