ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ಇಂಟರ್‌ನ್ಯಾಷನಲ್ ಟ್ರಾವೆಲ್ ಎಕ್ಸ್‌ಪೊದ (ಕೆಐಟಿಇ) ಎರಡನೇ ಆವೃತ್ತಿ, ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಫೆಬ್ರುವರಿ 26ರಿಂದ ಮೂರು ದಿನ ನಡೆಯಲಿದೆ.
ಟ್ರಾವೆಲ್ ಎಕ್ಸ್‌ಪೊದ ಕೈಪಿಡಿ ಹಾಗೂ ಲಾಂಛನವನ್ನು ಶನಿವಾರ ಬಿಡುಗಡೆ ಮಾಡಿದ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರು, ‘ಕರ್ನಾಟಕವನ್ನು ಪ್ರಮುಖ ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಲಾಗುತ್ತದೆ’ ಎಂದರು.
‘ರಾಜ್ಯದಲ್ಲಿ ಪ್ರವಾಸೋದ್ಯಮವು ಆರ್ಥಿಕ ಚಾಲಕ ಶಕ್ತಿಯಷ್ಟೇ ಆಗಿರದೇ, ಸಾಮಾಜಿಕ ಒಳಿತಿನ ಬಲವಾಗಿ, ಶಾಂತಿಯುತ ಸಹಬಾಳ್ವೆ ಬೆಳೆಸುವ ಸಾಧನವಾಗಿದೆ. ಕಲಿಕೆ ಹಾಗೂ ಪ್ರಬುದ್ಧತೆಯ ದಾರಿಯಾಗಿದೆ. ಜಗತ್ತಿನಲ್ಲಿ ಅಡೆತಡೆಗಳು ಆಗಾಗ ಭಿನ್ನಾಭಿಪ್ರಾಯಕ್ಕೆ ಕಾರಣವಾದಾಗ ಪ್ರವಾಸೋದ್ಯಮವು ತಪ್ಪು ತಿಳಿವಳಿಕೆಯ ಗೋಡೆಗಳನ್ನು ಒಡೆಯುವ ಮತ್ತು ಪರಸ್ಪರ ಗೌರವ, ಸಮಾನ ಅನುಭವ ಸೇತುಗಳನ್ನು ಸೃಜಿಸುತ್ತದೆ’ ಎಂದು ಹೇಳಿದರು.
‘ಯುನೆಸ್ಕೊ ವಿಶ್ವ ಪಾರಂಪರಿಕ ತಾಣವು ಸೇರಿದಂತೆ ರಾಜ್ಯದ ಐತಿಹಾಸಿಕ ಸಂಪತ್ತುಗಳನ್ನು ಪ್ರದರ್ಶಿಸಿ, ಸಾಂಸ್ಕೃತಿಕ, ಪಾರಂಪರಿಕ ಸ್ವತ್ತುಗಳ ರಕ್ಷಣೆಯತ್ತ ಗಮನ ಕೇಂದ್ರೀಕರಿಸಿದ್ದೇವೆ. ಕರ್ನಾಟಕದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಗಮನಾರ್ಹ ಪರಿವರ್ತನಾ ಪಥದಲ್ಲಿದೆ. ಸರ್ಕಾರವು ‘ಪ್ರವಾಸೋದ್ಯಮ ನೀತಿ 2024-29’ ಜಾರಿಗೆ ತಂದಿದೆ. ರಾಜ್ಯದಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯಗಳು, ಹೂಡಿಕೆ ಮತ್ತು ಆಕರ್ಷಣೆ, ಕೌಶಲಾಭಿವೃದ್ಧಿ ಮೂಲಕ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ನಾವು ಬದ್ಧರಾಗಿದ್ದೇವೆ’ ಎಂದರು.
‘ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್‌ಪೊ’ ಮೂಲಕ ರಾಜ್ಯದ ವಿವಿಧ ಮತ್ತು ವಿಶಿಷ್ಟ ಪ್ರವಾಸಿ ತಾಣಗಳ ಚಿತ್ರಣವನ್ನು ಪ್ರದರ್ಶಿಸಲಿದ್ದೇವೆ ಎಂದು ತಿಳಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ. ಫಹೀಂ, ನಿರ್ದೇಶಕ ಡಾ. ರಾಜೇಂದ್ರ ಕೆ.ವಿ. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.