ಬೆಂಗಳೂರು: ಮಹಿಳಾ ಕೈಗಾರಿಕೋದ್ಯಮಿಗಳ ಒಕ್ಕೂಟ ‘ಉಬುಂಟು’ ಬುಧವಾರ ನಗರದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ನಟಿ ಉಮಾಶ್ರಿ, ರಂಗಕರ್ಮಿ ಬಿ.ಜಯಶ್ರೀ ಹಾಗೂ ಕಲಬುರಗಿಯ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಸೇರಿ ವಿವಿಧ ಕ್ಷೇತ್ರಗಳ 16 ಸಾಧಕಿಯರಿಗೆ ‘ವುಮೆನ್ ಆಫ್ ವರ್ತ್(ವಾವ್) 2025’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ನಿರ್ದೇಶಕ ನಿತೇಶ್ ಕೆ. ಪಾಟೀಲ್, ‘ಸ್ಪರ್ಧಾತ್ಮಕ ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಪರಿಕರಗಳನ್ನು ಮಹಿಳೆಯರ ನೇತೃತ್ವದ ಉದ್ಯಮಗಳಿಗೆ ಒದಗಿಸಲಾಗುತ್ತದೆ‘ ಎಂದು ತಿಳಿಸಿದರು.
ಉಬುಂಟು ಒಕ್ಕೂಟದ ಸ್ಥಾಪಕಿ ಕೆ.ರತ್ನಪ್ರಭಾ ಅವರು, ಡಿಜಿಟಲ್ ಕೌಶಲ ಮತ್ತು ಸ್ಪರ್ಧೆ ಹೆಚ್ಚಿಸಲು ಹೆಚ್ಚಿಸಲು 1,000 ಮಹಿಳಾ ಉದ್ಯಮಿಗಳಿಗೆ ನೂತನ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಸೈಬರ್ ಸುರಕ್ಷತೆ, ಇ-ಕಾಮರ್ಸ್ ಮತ್ತು ವ್ಯವಹಾರ ಜಾಲಗಳ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಅಸೋಸಿಯೇಷನ್ ಆಫ್ ಬಿಸಿನೆಸ್ ವುಮೆನ್ ಇನ್ ಕಾಮರ್ಸ್(ಎಬಿಡಬ್ಲ್ಯುಸಿಐ) ಸಮಾಲೋಚಕ ಸಂಸ್ಥಾಪಕಿ ಮತ್ತು ಪ್ರಧಾನ ಕಾರ್ಯದರ್ಶಿ ಪಾರುಲ್ ಸೋನಿ ಅವರು, ‘ಮಹಿಳೆಯರು ನಡೆಸುವ ಉದ್ಯಮಗಳಿಗೆ ಅವಕಾಶಗಳನ್ನು ಸೃಷ್ಟಿಸುವಲ್ಲಿ ಇ-ಪ್ಲಾಟ್‌ಫಾರ್ಮ್‌ಗಳ ಪಾತ್ರವನ್ನು ವಿವರಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್‌ಕುಮಾರ್ ಖತ್ರಿ ಮಾತನಾಡಿದರು. ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳಿದ್ದವು. ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಅಸ್ಸಾಂ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 300 ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.