ADVERTISEMENT

ನಿವೇಶನಗಳ ಮೇಲೆ ಹೂಡಿಕೆ: ರಾಜ್ಯದ ಹಲವು ನಗರಗಳಲ್ಲಿ ತಲೆಯೆತ್ತಿದ ವಂಚನೆ ಜಾಲ

ಆದಿತ್ಯ ಕೆ.ಎ
Published 16 ಮಾರ್ಚ್ 2025, 23:30 IST
Last Updated 16 ಮಾರ್ಚ್ 2025, 23:30 IST
<div class="paragraphs"><p> ವಂಚನೆ (ಪ್ರಾತಿನಿಧಿಕ ಚಿತ್ರ)</p></div>

ವಂಚನೆ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಸೈಬರ್‌ ವಂಚನೆಯಿಂದ ಹಣ ಕಳೆದುಕೊಳ್ಳುವ ಭಯದಲ್ಲಿ ನಿವೇಶನಗಳ ಮೇಲೆ ಹೂಡಿಕೆ ಮಾಡಲು ಹೋಗಿ ಅಲ್ಲಿಯೂ ಹಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗಿವೆ.

ನಿವೇಶನಗಳ ಮೇಲೆ ಹೂಡಿಕೆ ಮಾಡಿದರೆ ಹಣ ಸುರಕ್ಷಿತವೆಂದು ನಂಬಿ, ಹಲವರು ಹಣ ಕಳೆದುಕೊಂಡಿದ್ದಾರೆ. ಅವರೀಗ ಪೊಲೀಸ್‌ ಠಾಣೆಯ ಮೆಟ್ಟಿಲೇರುತ್ತಿದ್ದಾರೆ. ನಿವೇಶನ ಮಾರಾಟದ ಹೆಸರಿನಲ್ಲಿ ವಂಚನೆ ಜಾಲ ರಾಜ್ಯದ ಹಲವು ನಗರಗಳಲ್ಲಿ ಮತ್ತೆ ಸಕ್ರಿಯವಾಗಿದೆ.  

ADVERTISEMENT

ಸಕಲ ಸೌಲಭ್ಯ ಹೊಂದಿರುವ ಲೇಔಟ್‌ನಲ್ಲಿ ನಿವೇಶನ ಮಾರಾಟ ಮಾಡುವುದಾಗಿ ನಂಬಿಸಿ, ವಿವಿಧ ಜಿಲ್ಲೆಯ 41 ಮಂದಿಗೆ ಕರೆ ಮಾಡಿ ₹3.17 ಕೋಟಿ ವಂಚನೆ ನಡೆಸಲಾಗಿದ್ದು, ಈ ಸಂಬಂಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

‘ಬ್ಯಾಂಕ್‌ ಖಾತೆಯಲ್ಲಿ ಹಣವಿಟ್ಟರೆ ಸೈಬರ್‌ ವಂಚನೆಗೆ ಒಳಗಾಗುವ ಭಯವಿತ್ತು. ನಿವೇಶನ ಖರೀದಿಸಿದರೆ ಹಣ ದುಪ್ಪಟ್ಟಾಗಲಿದೆ ಎನ್ನುವ ಕಾರಣಕ್ಕೂ ಸೂಕ್ತ ಬಡಾವಣೆಯಲ್ಲಿ ನಿವೇಶನಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸಿದ್ದೆ. ವಂಚಕರು ಸಂಪರ್ಕಿಸಿ ಮೋಸ ಮಾಡಿದ್ದಾರೆ’ ಎಂದು ಹಣ ಕಳೆದುಕೊಂಡವರು ಹೇಳಿದರು.

‘ಅಶೋಕನಗರದ ನಿವಾಸಿ ರವೀಂದ್ರ ಸುವರ್ಣ ಅವರಿಗೆ ಅಪರಿಚಿತ ಸಂಖ್ಯೆಯಿಂದ ತೇಜಸ್ವಿನಿ ಎಂಬುವವರು ಕರೆ ಮಾಡಿ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಅಗರ ಗ್ರಾಮದ ಸರ್ವೆ ನಂ. 115ರಲ್ಲಿ ಖಾಲಿ ನಿವೇಶನಗಳು ಮಾರಾಟಕ್ಕೆ ಸಿದ್ಧವಾಗಿವೆ. ಆಸಕ್ತಿಯಿದ್ದರೆ ಭೇಟಿ ನೀಡಬಹುದು ಎಂಬುದಾಗಿ ನಂಬಿಸಿದ್ದರು. ಅವರ ಮಾತು ನಂಬಿ ರವೀಂದ್ರ ಸುವರ್ಣ – ಚಂದ್ರಾವತಿ ದಂಪತಿ ಲೇಔಟ್‌ಗೆ ಭೇಟಿ ನೀಡಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಲೇಔಟ್‌ಗೆ ದಂಪತಿ ಭೇಟಿ ನೀಡಿದ್ದಾಗ ಮನು ಎಂಬ ವ್ಯಕ್ತಿ ಬಂದಿದ್ದರು. ಎಲ್ಲ ನಿವೇಶನಗಳು ಸಾಲಿಸಿಟರ್‌ ಗ್ರೂಪ್‌ಗೆ ಸೇರಿದ್ದು ಅದರ ಮಾಲೀಕರು ಮಹೇಶ್‌ಕುಮಾರ್‌ ಹಾಗೂ ಆರ್.ಚೈತ್ರಾ. ಅವರ ಕಚೇರಿ ಆರ್‌.ಟಿ. ನಗರದಲ್ಲಿದೆ ಎಂಬುದಾಗಿ ನಂಬಿಸಿದ್ದರು. ಅದಾದ ಮೇಲೆ ದಂಪತಿ ಮುಂಗಡವಾಗಿ ₹99 ಸಾವಿರ ಪಾವತಿಸಿದ್ದರು. ಕಂಪನಿಯ ನಿರ್ದೇಶಕರು ಎಂದು ಹೇಳಿಕೊಂಡಿದ್ದ ಇಬ್ಬರನ್ನು ಭೇಟಿ ಮಾಡಿದ್ದ ದಂಪತಿ ₹15 ಲಕ್ಷ ಮೊತ್ತದ ಮೂರು ಚೆಕ್‌ ಅನ್ನು ನೀಡಿದ್ದರು. 30X40 ಅಡಿ ಅಳತೆಯ ನಿವೇಶನಕ್ಕೆ ₹32.38 ಲಕ್ಷ ಆಗಲಿದ್ದು ಬಾಕಿ ಹಣ ಪಾವತಿಸಿದ ಮೇಲೆ ಕ್ರಯಪತ್ರ ನೀಡುವುದಾಗಿ ಕಂಪನಿ ನಿರ್ದೇಶಕರು ನಂಬಿಸಿದ್ದರು. 90 ದಿನಗಳು ಕಳೆದರೂ ಕ್ರಯಪತ್ರ ನೀಡದ ಕಾರಣ ಸಂಶಯಗೊಂಡ ದಂಪತಿ, ಹಣ ವಾಪಸ್‌ ನೀಡುವಂತೆ ಕೇಳಿದ್ದರು. ಆಗ ನಕಲಿ ಪತ್ರವೊಂದನ್ನು ನೀಡಿದ್ದ ಮಹೇಶ್ ಕುಮಾರ್‌ ಬಳಿಕ ತಲೆಮರೆಸಿಕೊಂಡಿದ್ದಾರೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ನಿವೇಶನ ಮಾರಾಟ ಮಾಡುವುದಾಗಿ ನಂಬಿಸಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಯ ಖರೀದಿದಾರರಿಗೆ ವಂಚನೆ ನಡೆಸಿರುವುದು ತನಿಖೆಯ ವೇಳೆ ಪತ್ತೆಯಾಗಿದೆ. ಈ ಪ್ರಕರಣದ ಸಂಬಂಧ ಕೆ.ಸತೀಶ್‌ ಅವರಿಂದ ಮಾಹಿತಿ ಪಡೆಯಲಾಗಿದ್ದು 41 ಮಂದಿಗೆ ವಂಚನೆ ನಡೆಸಿರುವುದು ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ.

ಒಂದೇ ನಿವೇಶನ ಇಬ್ಬರಿಗೆ ಮಾರಾಟ:

‘ಹಲವು ಜಿಲ್ಲೆಗಳಲ್ಲಿ ಯಾರದ್ದೋ ಲೇಔಟ್‌ ತೋರಿಸಿ ಹಣ ಪಡೆದು ವಂಚನೆ ನಡೆಸುತ್ತಿರುವ ಜಾಲ ಸಕ್ರಿಯವಾಗಿದೆ. ಅಲ್ಲದೇ ಒಂದೇ ನಿವೇಶನವನ್ನು ಇಬ್ಬರಿಗೆ ಮಾರಾಟ ಮಾಡಿರುವುದು ಹಾಗೂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ನಿವೇಶನ ತೋರಿಸಿ ಮಾರಾಟ ಮಾಡುತ್ತಿರುವ ಪ್ರಕರಣಗಳೂ ಹೆಚ್ಚಿವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ಬಿ.ದಯಾನಂದ 
ಖರೀದಿಗೂ ಮುನ್ನ ದಾಖಲೆಗಳನ್ನು ಪರಿಶೀಲಿಸಬೇಕು. ಲೇಔಟ್‌ನ ನಿಜವಾದ ಮಾಲೀಕರು ಯಾರು ಎಂಬುದನ್ನು ಪತ್ತೆಹಚ್ಚಬೇಕು. ಆ ನಂತರವೇ ನಿವೇಶನ ಖರೀದಿಸಿದರೆ ಮೋಸ ಆಗುವುದಿಲ್ಲ
– ಬಿ.ದಯಾನಂದ ನಗರ ಪೊಲೀಸ್‌ ಕಮಿಷನರ್‌
ಆಕರ್ಷಕ ಜಾಹೀರಾತು
ಸಕಲ ಸೌಲಭ್ಯಗಳಿರುವ ಲೇಔಟ್‌ನಲ್ಲಿ ಕಡಿಮೆ ಬೆಲೆಗೆ ನಿವೇಶನ ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಜಾಹೀರಾತು ನೀಡಲಾಗುತ್ತದೆ. ಲೇಔಟ್‌ ಪಕ್ಕದಲ್ಲೇ ಆಸ್ಪತ್ರೆ ಹೆದ್ದಾರಿ ಶಾಲೆಗಳು ಇವೆ. ಕುಡಿಯುವ ನೀರು ಹಾಗೂ ಯುಜಿಡಿ ಸಂಪರ್ಕವಿದೆ ಎಂದು ಆಮಿಷವೊಡ್ಡಲಾಗುತ್ತದೆ. ಇದನ್ನೇ ನಂಬಿ ಹಲವರು ಯಾವುದೇ ದಾಖಲೆಗಳನ್ನು ಪರಿಶೀಲಿಸದೇ ನಿವೇಶನಕ್ಕೆ ಖರೀದಿಗೆ ಮುಂದಾಗಿ ಮೋಸ ಹೋಗುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.
ಇಬ್ಬರ ವಿರುದ್ಧ ಎಫ್‌ಐಆರ್‌
ವಂಚನೆ ಪ್ರಕರಣದ ಸಂಬಂಧ ಅಶೋಕನಗರದ ಭೋವಿ ಲೇನ್‌ನ ಚಂದ್ರಾವತಿ ಅವರು ನೀಡಿದ ದೂರು ಆಧರಿಸಿ ಸಾಲಿಸಿಟರ್‌ ಗ್ರೂಪ್‌ನ ಮಾಲೀಕರು ಎಂದು ಹೇಳಿಕೊಂಡಿರುವ ಆರ್‌.ಮಹೇಶ್‌ಕುಮಾರ್‌ ಹಾಗೂ ಚೈತ್ರಾ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.