ನಾಟಕ ಸ್ಪರ್ಧೆಗೆ ಅರ್ಜಿ ಆಹ್ವಾನ
ಬೆಂಗಳೂರು: ಎ.ಎಸ್. ಮೂರ್ತಿ ಪ್ರಾರಂಭಿಸಿದ ಚಿತ್ರಾ ತಂಡದ 75ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಅಭಿನಯ ತರಂಗದ ಸಹಯೋಗದಲ್ಲಿ ಅಕ್ಟೋಬರ್ 24 ರಿಂದ 30ರವರೆಗೆ ಸುಚಿತ್ರಾ ಭಾನು ನಾಣಿ ಅಂಗಳದಲ್ಲಿ ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ನಾಟಕದ ಅವಧಿಯು ಕನಿಷ್ಠ 45 ನಿಮಿಷ ಹಾಗೂ ಗರಿಷ್ಠ 60 ನಿಮಿಷವಿರಬೇಕು. 40 ವರ್ಷದೊಳಗಿನವರು ನಾಟಕವನ್ನು ನಿರ್ದೇಶಿಸಿರಬೇಕು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ₹50 ಸಾವಿರ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ₹ 20 ಸಾವಿರ ಹಾಗೂ ತೃತೀಯ ಸ್ಥಾನ ಪಡೆಯುವ ತಂಡಕ್ಕೆ ₹10 ಸಾವಿರ ಬಹುಮಾನ ನೀಡಲಾಗುತ್ತದೆ. ಆಸಕ್ತರು ಸೆಪ್ಟೆಂಬರ್ 15ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಇದೇ 15ರಿಂದ ಅಧ್ಯಯನ ಶಿಬಿರ
ಬೆಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ (ಅಂಬೇಡ್ಕರ್ ವಾದ) ಸೆ.15ರಿಂದ 17ರವರೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ ಆಯೋಜಿಸಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ‘ದಲಿತ ಹಾಗೂ ದಮನಿತ ಸಮುದಾಯಗಳಲ್ಲಿ ಸ್ವಾಭಿಮಾನ ಮತ್ತು ಸ್ವಾವಲಂಬನೆ
ಯಿಂದ ಬದುಕಲು ಸಂವಿಧಾನಾತ್ಮಕ ಹಕ್ಕುಗಳಿಗೆ ದಲಿತ ಸಂಘರ್ಷ ಸಮಿತಿ ಚಳವಳಿಯನ್ನು ರೂಪಿಸುತ್ತಿದೆ. ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗುವ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಬದಲಾವಣೆಗಳನ್ನು ಗ್ರಹಿಸಲು ಅಧ್ಯಯನ ಶಿಬಿರಗಳನ್ನು ಆಯೋಜಿಸಲಾಗುತ್ತದೆ’ ಎಂದರು.
‘3 ದಿನ ನಡೆಯುವ ಈ ಶಿಬಿರದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್‌ನ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ ಅವರು ಇದೇ 15ರಂದು ಶಿಬಿರವನ್ನು ಉದ್ಘಾಟಿಸಲಿದ್ದಾರೆ, ಸಾಹಿತಿ ಸುಬ್ಬು ಹೊಲೆಯಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದರು.
ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರ
ಬೆಂಗಳೂರು: ಕೆ.ಆರ್. ಮಾರುಕಟ್ಟೆಯಿಂದ ಸೋಲೂರಿಗೆ ಹಾಗೂ ಕೆಂಪೇಗೌಡ ಬಸ್ ನಿಲ್ದಾಣ
ದಿಂದ ಮಾದಿಗೊಂಡನಹಳ್ಳಿಗೆ ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚಾರ ಬುಧವಾರ ಆರಂಭಗೊಂಡಿದೆ.
ಕೆ.ಆರ್.ಮಾರುಕಟ್ಟೆಯಿಂದ ಹೊರಡುವ ಬಸ್ ಸುಂಕದಕಟ್ಟೆ, ಕಡಬಗೆರೆ ಕ್ರಾಸ್, ತಾವರೆಕೆರೆ, ವರದೇನಹಳ್ಳಿ ಹ್ಯಾಂಡ್ ಪೋಸ್ಟ್, ಮೋಟಗಾನಹಳ್ಳಿ, ಕೋಡಿಹಳ್ಳಿ, ನಾಗನಹಳ್ಳಿ, ಶೆಟ್ಟಿಪಾಳ್ಯ, ಗುಡೇಮಾರನಹಳ್ಳಿ, ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಮೂಲಕ ಸೋಲೂರು ತಲುಪಲಿದೆ. ಎರಡೂ ಕಡೆಯಿಂದ ದಿನಕ್ಕೆ ತಲಾ ನಾಲ್ಕು ಟ್ರಿಪ್‌ಗಳು ಇರಲಿವೆ.
ಕೆಂಪೇಗೌಡ ಬಸ್ ನಿಲ್ದಾಣ–ಮಾದಿಗೊಂಡನಹಳ್ಳಿ ನಡುವೆ ಎರಡೂ ಕಡೆಯಿಂದ ದಿನಕ್ಕೆ ತಲಾ ಎರಡು ಟ್ರಿಪ್ ಇರಲಿದ್ದು, ಯಶವಂತಪುರ, ಮಾದನಾಯಕನಹಳ್ಳಿ, ನೆಲಮಂಗಲ, ಯಂಟಗಾನಹಳ್ಳಿ, ಮಹದೇವಪುರ, ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಮೂಲಕ ಬಸ್ ಸಂಚರಿಸಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಮೋಹನ ಕುಂಟಾರ್‌ಗೆ ಅನುವಾದ ಪ್ರಶಸ್ತಿ
ಬೆಂಗಳೂರು: ದ್ರಾವಿಡ ಭಾಷಾ ಅನುವಾದಕರ ಸಂಘದ (ಡಿಬಿಟಿಎ) ವತಿಯಿಂದ ನೀಡುವ ಡಿಬಿಟಿಎ ಅನುವಾದ ಪ್ರಶಸ್ತಿಗೆ ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಎ. ಮೋಹನ ಕುಂಟಾರ್ ಆಯ್ಕೆಯಾಗಿದ್ದಾರೆ ಎಂದು ಡಿಬಿಟಿಎ ಅಧ್ಯಕ್ಷೆ ಸುಷ್ಮಾಶಂಕರ್ತಿ ಳಿಸಿದ್ದಾರೆ.
ಮಲೆಯಾಳ ಭಾಷೆಯ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ತಕಳಿ ಶಿವಶಂಕರ ಪಿಳ್ಳೈ ಅವರ ಪ್ರಸಿದ್ಧ ಕಾದಂಬರಿ ‘ಚೆಮ್ಮೀನ್’ನ ಕನ್ನಡ ಅನುವಾದಕ್ಕೆ (ಚೆಮ್ಮೀನು) ಪ್ರಶಸ್ತಿ ಲಭಿಸಿದೆ. ₹11,111 ನಗದು, ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಸೆಪ್ಟೆಂಬರ್ 26ರಂದು ನಯನ ಸಭಾಂಗಣದಲ್ಲಿ ಜರುಗಲಿದೆ.
ದಾಳಿಂಬೆ ಕೃಷಿ ಪ್ರವಾಸೋದ್ಯಮ
ಬೆಂಗಳೂರು: ಯಲಹಂಕ ತಾಲ್ಲೂಕಿನ ನಾಗದಾಸನಹಳ್ಳಿಯಲ್ಲಿ ಸೆಪ್ಟೆಂಬರ್ 13ರಿಂದ ದಾಳಿಂಬೆ ಕೃಷಿ ಪ್ರವಾಸೋದ್ಯಮ ಆಯೋಜಿಸಲಾಗಿದೆ.
ನಾಗದಾಸನಹಳ್ಳಿಯಲ್ಲಿರುವ ಎನ್‌ಸಿಆರ್ ಫಾರ್ಮ್‌ನಲ್ಲಿ ಒಂದು ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗಿದೆ. ಗ್ರಾಹಕರು ಭೇಟಿ ನೀಡಿ ಇಷ್ಟವಾದ ಗಿಡದಲ್ಲಿರುವ ಹಣ್ಣುಗಳನ್ನು ಆಯ್ಕೆ ಮಾಡಿ, ಖರೀದಿಸಬಹುದು. ಮಾರುಕಟ್ಟೆ ದರದಲ್ಲಿ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ. ಪ್ರವೇಶ ಉಚಿತ. ಮಾಹಿತಿಗೆ ಮೊ. 6366656410, 9449836061 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.