ADVERTISEMENT

ವಿಮಾನ ನಿಲ್ದಾಣದಲ್ಲಿ ಐಒಸಿ ಬಂಕ್‌

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2018, 19:58 IST
Last Updated 30 ನವೆಂಬರ್ 2018, 19:58 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ತೆರೆಯಲಾದ ಇಂಡಿಯನ್‌ ಆಯಿಲ್‌ನ ಇಂಧನ ಕೇಂದ್ರ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ತೆರೆಯಲಾದ ಇಂಡಿಯನ್‌ ಆಯಿಲ್‌ನ ಇಂಧನ ಕೇಂದ್ರ   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಯನ್‌ ಆಯಿಲ್‌ನ ಕಂಪನಿ ಸ್ವಾಮ್ಯದ ಮತ್ತು ಕಂಪನಿಯೇ ನಿರ್ವಹಿಸುವ (COCO) ಇಂಧನ ಕೇಂದ್ರ (ಪೆಟ್ರೋಲ್ ಬಂಕ್‌) ಪ್ರಾಯೋಗಿಕವಾಗಿ ಆರಂಭವಾಗಿದೆ.

ಇದರಿಂದ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಮಾತ್ರವಲ್ಲ, ಅಲ್ಲಿನ ಉದ್ಯೋಗಿಗಳಿಗೂ ಅನುಕೂಲವಾಗಲಿದೆ. ನಿಲ್ದಾಣಕ್ಕೆ ಸಮೀಪದಲ್ಲೇ ಬಂಕ್‌ ಇರುವುದರಿಂದ ಇನ್ನು ಮುಂದೆ ಪ್ರಯಾಣಿಕರು ತಮ್ಮ ಇಂಧನ ಅಗತ್ಯದ ಬಗ್ಗೆ ಪೂರ್ವಯೋಜನೆ ಮಾಡಬೇಕಾಗಿಲ್ಲ. ಈ ಕೇಂದ್ರಕ್ಕೆ ವಿಶೇಷ ವಿನ್ಯಾಸದ ಉಬ್ಬು ಮೇಲಾವರಣವನ್ನು ರಚಿಸಲಾಗಿದ್ದು ದೂರದಲ್ಲೇ ಗಮನ ಸೆಳೆಯುವಂತಿದೆ.

ವಾರದ ಏಳೂ ದಿನಗಳು, 24 ಗಂಟೆ ಈ ಬಂಕ್‌ ಕಾರ್ಯ ನಿರ್ವಹಿಸುತ್ತದೆ. ಪೂರ್ಣ ಸ್ವಯಂ ಚಾಲಿತ ಮತ್ತು ದೂರದಲ್ಲೇ ನಿಗಾವಹಿಸುವ ವ್ಯವಸ್ಥೆ ಬಂಕ್‌ನಲ್ಲಿದೆ.

ADVERTISEMENT

ಉಚಿತ ನೈಟ್ರೋಜನ್‌ ಅನಿಲ, ಮೊಬೈಲ್‌ ಕಾರ್‌ ಕ್ಲೀನಿಂಗ್‌ ಸೌಲಭ್ಯ, ಶುದ್ಧ ಕುಡಿಯುವ ನೀರು ಮತ್ತು ಆಧುನಿಕ ಶೌಚಾಲಯಗಳನ್ನು ಈ ಬಂಕ್‌ ಹೊಂದಿದೆ. ವಿವಿಧ ಕ್ಷೇತ್ರಗಳ ಗ್ರಾಹಕರಿಗೆ ಅನುಕೂಲವಾಗುವ ಆಕರ್ಷಕ ಬಹುಮಾನ ಯೋಜನೆಗಳನ್ನೂ ಐಒಸಿ ಪ್ರಕಟಿಸಿದೆ.

10 ಕಿಲೋವಾಟ್‌ ಸಾಮರ್ಥ್ಯದ ಆನ್‌ಗ್ರಿಡ್‌ ಸೋಲಾರ್‌ ವ್ಯವಸ್ಥೆ ಬಂಕ್‌ನಲ್ಲಿದೆ. ತ್ಯಾಜ್ಯ ನೀರು ಸಂಸ್ಕರಣಾ ಘಟಕ, ತೈಲ–ನೀರು ಪ್ರತ್ಯೇಕಿಸುವ ಘಟಕಗಳೂ ಇವೆ. ಶುದ್ಧೀಕೃತ ನೀರನ್ನು ಬಂಕ್‌ ಪ್ರದೇಶದಲ್ಲಿರುವ ಉದ್ಯಾನಕ್ಕೆ ಬಳಸುವ ವ್ಯವಸ್ಥೆ ಇದೆ.

‘ವಿಪರೀತ ದಟ್ಟಣೆಯ ಸಂದರ್ಭದಲ್ಲಿ ಇಂಧನ ತುಂಬಿಸಲೂ ಸಮಯ ಸಿಗುವುದಿಲ್ಲ. ಇಲ್ಲಿ ಬಂಕ್‌ ತೆರೆದಿರುವುದರಿಂದ ನಮ್ಮಂಥ ಚಾಲಕರಿಗೆ ಅನುಕೂಲವಾಗಿದೆ’ ಎಂದು ಟ್ಯಾಕ್ಸಿ ಚಾಲಕ ರಾಮನಗೌಡ ಹೇಳಿದರು.

‘ಪ್ರಯಾಣಿಕರಿಗಾಗಿ ಕಾಯುವ ಅವಧಿಯಲ್ಲಿ ಇಲ್ಲಿ ಇಂಧನ ತುಂಬಿಸಿಕೊಂಡು ಕಾರು ಸ್ವಚ್ಛಗೊಳಿಸಿ ಹೋಗಲು ಈ ಬಂಕ್‌ ನೆರವಾಗಿದೆ’ ಎಂದು ಇನ್ನೊಬ್ಬ ಚಾಲಕ ಸುರೇಶ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.