ADVERTISEMENT

ಬೆಂಗಳೂರು ಟ್ರಾಫಿಕ್ ನಿರ್ವಹಣೆ ಯೂಸ್‌ಲೆಸ್; ಪೊಲೀಸರು ಕೇರ್‌ಲೆಸ್‌: SP ಸಂಸದ ರಾಯ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2025, 6:41 IST
Last Updated 1 ಡಿಸೆಂಬರ್ 2025, 6:41 IST
<div class="paragraphs"><p>ಸಮಾಜವಾದಿ ಪಕ್ಷದ ಸಂಸದ ರಾಜೀವ್‌ ರಾಯ್‌</p></div>

ಸಮಾಜವಾದಿ ಪಕ್ಷದ ಸಂಸದ ರಾಜೀವ್‌ ರಾಯ್‌

   

ಪಿಟಿಐ ಚಿತ್ರ

ಬೆಂಗಳೂರು: ಬೆಂಗಳೂರು ಟ್ರಾಫಿಕ್‌ ಸಮಸ್ಯೆ ಬಗ್ಗೆ ದೂರುಗಳ ಸರಮಾಲೆಯೇ ಇದೆ. ಈ ನಡುವೆ ಭಾನುವಾರ ನಗರಕ್ಕೆ ಭೇಟಿ ನೀಡಿದ್ದ ಸಮಾಜವಾದಿ ಪಕ್ಷದ ಸಂಸದ ರಾಜೀವ್‌ ರಾಯ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟ್ಯಾಗ್‌ ಮಾಡಿ, ‘ಮಾನ್ಯ ಮುಖ್ಯಮಂತ್ರಿಯವರೆ, ನಿಮ್ಮಲ್ಲಿ ಟ್ರಾಫಿಕ್‌ ನಿರ್ವಹಣೆಗೆ ಅತಿ ಕೆಟ್ಟ ವ್ಯವಸ್ಥೆಯಿದೆ. ಟ್ರಾಫಿಕ್ ಪೊಲೀಸರು ಕೂಡ ಬೇಜವಾಬ್ದಾರಿಯುತ, ನಿಷ್ಪ್ರಯೋಜಕರಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ. 

ಜತೆಗೆ, ಟ್ರಾಫಿಕ್‌ ಪೊಲೀಸ್‌ ಅಧಿಕಾರಿಗಳ ಗೈರಿನ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಅವರು, ‘ರಸ್ತೆಯುದ್ದಕ್ಕೂ ಯಾವೊಬ್ಬ ಟ್ರಾಫಿಕ್ ಪೊಲೀಸರೂ ಕಾಣಸಿಗಲಿಲ್ಲ. ಕೊನೆಪಕ್ಷ ದೂರವಾಣಿ ಕರೆಯನ್ನೂ ಸ್ವೀಕರಿಸಿಲ್ಲ’ ಎಂದು ಕರೆ ಮಾಡಿರುವ ಬಗ್ಗೆ ಸ್ಕ್ರೀನ್‌ ಶಾಟ್‌ ಹಂಚಿಕೊಂಡಿದ್ದಾರೆ.

‘ಇಂದು ಗಂಟೆಗಳ ಕಾಲ ರಾಜಕುಮಾರ್ ಸಮಾಧಿ ರಸ್ತೆಯಲ್ಲಿ ಸಿಲುಕಿದ್ದೆವು. ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಪ್ರಯಾಣಿಸಬೇಕಿತ್ತು. ಆದರೆ ಅತಿಯಾದ ಟ್ರಾಫಿಕ್‌ನಲ್ಲಿ ಸಿಲುಕಿ ವಿಮಾನ ಹೊರಡುವ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ತಲುಪುವುದು ಕಷ್ಟವಾಗಿದೆ. ಈ ಸುಂದರ ನಗರದ ಹೆಸರನ್ನು ಹಾಳು ಮಾಡಲು ಈ ಅದಕ್ಷ ಅಧಿಕಾರಿಗಳೇ ಸಾಕು. ನಿಸ್ಸಂದೇಹವಾಗಿ ಈಗ ಬೆಂಗಳೂರು ಸಂಚಾರ ಅತ್ಯಂತ ಕುಖ್ಯಾತ ಸಂಚಾರ ಎಂಬ ಖ್ಯಾತಿಯನ್ನು ಗಳಿಸಿದೆ’ ಎಂದು ಬರೆದುಕೊಂಡಿದ್ದಾರೆ.

ತಮ್ಮ ಬರಹದಲ್ಲಿ ಬೆಂಗಳೂರು ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್‌ ಸಿಂಗ್‌ ಮತ್ತು ಬೆಂಗಳೂರು ನಗರ ಸಂಚಾರ ಪೊಲೀಸ್ ಜಂಟಿ ಆಯುಕ್ತರನ್ನು ಟ್ಯಾಗ್‌ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.