ADVERTISEMENT

₹82 ಲಕ್ಷ ಹಣ ಜಪ್ತಿ: ದರ್ಶನ್‌, ಪ್ರದೋಷ್‌ಗೆ ಐ.ಟಿ ವಿಚಾರಣೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 16:27 IST
Last Updated 7 ಡಿಸೆಂಬರ್ 2025, 16:27 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಪ್ತಿ ಮಾಡಿರುವ ₹82 ಲಕ್ಷ ಹಣದ ಸಂಬಂಧ ಆರೋಪಿ ದರ್ಶನ್‌ ಅವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತೊಮ್ಮೆ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ನ್ಯಾಯಾಲಯವು ಈ ಹಣದ ಮೂಲದ ಬಗ್ಗೆ ತನಿಖೆ ನಡೆಸಲು ಸೂಚಿಸಿತ್ತು. ಹಾಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರನ್ನು ವಿಚಾರಣೆ ನಡೆಸಿ ಹಣದ ಬಗ್ಗೆ ಮಾಹಿತಿ ಕೇಳಲು ಅಧಿಕಾರಿಗಳು ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಅನುಮತಿ ಕೋರಲು ನಿರ್ಧರಿಸಿದ್ದಾರೆ.

2024ರ ನವೆಂಬರ್ 21ರಂದು ಐ.ಟಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ‘ಕೃಷಿಯಿಂದ ₹25 ಲಕ್ಷ ಲಾಭ, ಸಾಕು ಪ್ರಾಣಿಗಳ ಮಾರಾಟದಿಂದ ₹ 15 ಲಕ್ಷ, ಉಳಿದ ಹಣವನ್ನು ಅಭಿಮಾನಿಗಳು ನೀಡಿದ್ದರು’ ಎಂದು ದರ್ಶನ್ ತಿಳಿಸಿದ್ದರು.

ADVERTISEMENT

ಪ್ರಕರಣದ 14ನೇ ಆರೋಪಿ ಪ್ರದೋಷ್ ಮನೆಯಲ್ಲಿ 2024ರ ಜೂನ್ 12ರಂದು ಜ‌ಪ್ತಿ ಮಾಡಿರುವ ₹30 ಲಕ್ಷದ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಹಣ ಎಲ್ಲಿಂದ ಬಂತು? ಯಾರು ಕೊಟ್ಟಿದ್ದಾರೆ? ಹಣದ ಮೂಲ ಒದಗಿಸುವಂತೆ ಅಧಿಕಾರಿಗಳು ಕೇಳಿದ್ದರು. ‘ಮನೆಯಲ್ಲಿ ಸಿಕ್ಕ ಹಣ ನನ್ನದೂ ಅಲ್ಲ, ಕುಟುಂಬಕ್ಕೂ ಸೇರಿದ್ದಲ್ಲ’ ಎಂದು ಪ್ರದೋಷ್‌ ಹೇಳಿದ್ದರು. ಹಾಗಾಗಿ ಎರಡನೇ ಬಾರಿ ವಿಚಾರಣೆಗೆ ಒಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.