ADVERTISEMENT

ಹೆಮ್ಮೆಯಿಂದ ಹೇಳಬೇಕಾದುದಕ್ಕೆ ಮುಜುಗರದ ಕಾಲ: ಕವಿ ವಿಲ್ಸನ್‌ ಕಟೀಲ್‌

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 16:12 IST
Last Updated 9 ನವೆಂಬರ್ 2025, 16:12 IST
‘ಅಸಹನೆಯ ಯುಗದಲ್ಲಿ ಹೊಸಕಾವ್ಯದ ಧಾತುಗಳು’ ಗೋಷ್ಠಿಯಲ್ಲಿ ಮಂಜುಳಾ ಹುಲಿಕುಂಟೆ, ಎಚ್.ಎಲ್. ಪುಷ್ಪಾ, ಬಿ.ಆರ್. ರವಿಕಾಂತೇಗೌಡ, ಪ್ರತಿಭಾ ನಂದಕುಮಾರ್, ವಿಲ್ಸನ್ ಕಟೀಲ್ ಮತ್ತು ಶ್ವೇತಾ ಮಣಿ ಎಚ್.ಎಂ. ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ
‘ಅಸಹನೆಯ ಯುಗದಲ್ಲಿ ಹೊಸಕಾವ್ಯದ ಧಾತುಗಳು’ ಗೋಷ್ಠಿಯಲ್ಲಿ ಮಂಜುಳಾ ಹುಲಿಕುಂಟೆ, ಎಚ್.ಎಲ್. ಪುಷ್ಪಾ, ಬಿ.ಆರ್. ರವಿಕಾಂತೇಗೌಡ, ಪ್ರತಿಭಾ ನಂದಕುಮಾರ್, ವಿಲ್ಸನ್ ಕಟೀಲ್ ಮತ್ತು ಶ್ವೇತಾ ಮಣಿ ಎಚ್.ಎಂ. ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಎಲ್ಲರೂ ಒಂದೇ, ವ್ಯಕ್ತಿಗೌರವ, ಸಂವಿಧಾನದ ಪರ ಎಂಬುದೆಲ್ಲ ಹೆಮ್ಮೆಯ ವಿಚಾರ. ಆದರೆ, ಅದನ್ನು ಹೇಳಲು ಮುಜುಗರಪಟ್ಟುಕೊಳ್ಳುವ ಕಾಲದಲ್ಲಿದ್ದೇವೆ. ಜಾತಿ ಶ್ರೇಷ್ಠತೆ, ಧರ್ಮ ಶ್ರೇಷ್ಠತೆ, ಆಹಾರ ಶ್ರೇಷ್ಠತೆಗಳನ್ನು ಹೇಳಿಕೊಳ್ಳಲು ಮುಜುಗರಪಟ್ಟುಕೊಳ್ಳಬೇಕಿತ್ತು. ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು ವಿಪರ್ಯಾಸ’ ಎಂದು ಕವಿ ವಿಲ್ಸನ್‌ ಕಟೀಲ್‌ ಹೇಳಿದರು.

ಭಾನುವಾರ ನಡೆದ ‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’ದ ‘ಅಸಹನೆಯ ಯುಗದಲ್ಲಿ ಹೊಸಕಾವ್ಯದ ಧಾತುಗಳು’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೂರ್ಖತನ, ದ್ವೇಷ, ಅಸಹನೆ, ಸಲೀಸಾಗಿ ಹರಡುತ್ತಿವೆ. ಬುದ್ಧಿವಂತಿಕೆ, ಪ್ರೀತಿ, ವಿಚಾರಗಳು ಜನರನ್ನು ತಲುಪುವಲ್ಲಿ ಸೋಲುತ್ತಿವೆ. ಯಾಕೆ ಸೋಲುತ್ತಿವೆ. ಪ್ರತಿರೋಧದ ಧ್ವನಿಗಳು ಅಲ್ಲಲ್ಲಿ ಒಂಟಿಯಾಗಿವೆ. ಈ ಧ್ವನಿಗಳು ಒಟ್ಟಾದರೆ, ಒಂದು ಗುಂಪು ಆದರೆ ಶಕ್ತಿ ಬರುತ್ತದೆ. ಕೊರೊನಾ ಓಡಿಸಲು ತಟ್ಟೆ ಬಡಿಯಿರಿ ಎಂದರೆ ಎಲ್ಲರೂ ಸೌಟು, ತಟ್ಟೆ ಬಡಿದರು. ವಿಜ್ಞಾನ ತಲುಪಲಿಲ್ಲ. ಬರಹಗಾರರು ತಟ್ಟೆ, ಸೌಟುಗಳನ್ನೇ ಧಾತುವಾಗಿ ಇಟ್ಟುಕೊಂಡು ಜನರಿಗೆ ಸತ್ಯ ತಲುಪಿಸಬೇಕಿತ್ತು ಎಂದು ಹೇಳಿದರು.

ADVERTISEMENT

ಕವಯಿತ್ರಿ ಮಂಜುಳಾ ಹುಲಿಕುಂಟೆ ಮಾತನಾಡಿ, ‘ಹಿಂದೆ ಕ್ರೌರ್ಯಗಳಿದ್ದವು. ಈಗ ಅದರ ಜಾಗಕ್ಕೆ ಅಸಹನೆ ಬಂದು ಕುಳಿತಿದೆ. ಭಾಷೆ, ಮುಖ ಇಲ್ಲದ ಅಸಹನೆಗಳಿಗೆ ದೊಡ್ಡ ಮಟ್ಟದಲ್ಲಿ ವೇದಿಕೆಗಳು ಸಿಗುತ್ತಿವೆ. ಸೃಜನಶೀಲತೆಯ ಹೆಸರಲ್ಲಿ ಅಸಮಾನತೆ, ಅಸಹನೆ, ಅಸಹಿಷ್ಣುತೆಗಳು ಕಾವ್ಯಗಳಾಗಿವೆ. ಕೋಮಲ ಭಾಷೆಯಲ್ಲಿ ಅವುಗಳನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

‘ಅಸಮಾನತೆಯ ಭಾರತೀಯ ಸಮಾಜದಲ್ಲಿ ಹಿಂದಿನಿಂದಲೂ ಅಸಹಿಷ್ಣುತೆ ಇತ್ತು. ಯಾವ ಕಾಲದಲ್ಲಿಯೂ ಪ್ರಭುತ್ವ ತನಗಾಗದ್ದನ್ನು ಸಹಿಸಿಕೊಂಡಿರಲಿಲ್ಲ. ಈಗ ಲಜ್ಜೆ ಇಲ್ಲದೇ ಹರಿದಾಡುತ್ತಿದೆ ಎಂಬುದಷ್ಟೇ ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಇರುವ ವ್ಯತ್ಯಾಸ’ ಎಂದು ಜಂಟಿ ಪೊಲೀಸ್‌ ಕಮಿಷನರ್‌ ಬಿ.ಆರ್‌. ರವಿಕಾಂತೇಗೌಡ ಪ್ರತಿಪಾದಿಸಿದರು.

ಕವಯಿತ್ರಿ ಪ್ರತಿಭಾ ನಂದಕುಮಾರ್‌, ಬರಹಗಾರ್ತಿ ಎಚ್‌.ಎಲ್‌. ಪುಷ್ಪಾ ವಿಚಾರ ಮಂಡಿಸಿದರು. ಶ್ವೇತಾಮಣಿ ಎಚ್‌.ಎಂ. ಸಮನ್ವಯಕಾರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.