
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸಜಾ ಬಂದಿಗಳು ಹಾಗೂ ವಿಚಾರಣಾಧೀನ ಕೈದಿಗಳನ್ನು ಇರಿಸಲಾಗಿರುವ ಬ್ಯಾರಕ್‌ವೊಂದರಲ್ಲಿ ಕೊಳೆತ ಹಣ್ಣುಗಳನ್ನು ದಾಸ್ತಾನು ಮಾಡಿಕೊಂಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಳ್ಳಬಟ್ಟಿ ಮಾದರಿಯಲ್ಲಿ ನಶೆ ಏರಿಸುವ ಮದ್ಯವನ್ನು ಜೈಲಿನ ಬ್ಯಾರಕ್‌ನಲ್ಲಿ ಕೈದಿಗಳು ತಯಾರಿಕೆ ಮಾಡಿಕೊಳ್ಳುತ್ತಿದ್ದರೇ ಎಂಬ ಅನುಮಾನ ವ್ಯಕ್ತವಾಗಿದೆ.
ಕೊಳೆತ ದ್ರಾಕ್ಷಿ, ಸೇಬು ಹಾಗೂ ಗೋಧಿ, ಸಕ್ಕರೆ, ತಂಬಾಕು ಉತ್ಪನ್ನ ಸಂಗ್ರಹ ಮಾಡಿಕೊಂಡಿರುವುದು ಪತ್ತೆ ಆಗಿದೆ. ಈ ಹಣ್ಣುಗಳನ್ನು ಶೇಖರಿಸಿಕೊಂಡು ಮದ್ಯವನ್ನು ತಯಾರು ಮಾಡುಲಾಗುತಿತ್ತೇ ಎಂಬ ಅನುಮಾನ ವ್ಯಕ್ತವಾಗಿದ್ದು, ವಿಡಿಯೊ ದೃಶ್ಯಾವಳಿ ಆಧರಿಸಿ ಪರಿಶೀಲನೆ ನಡೆಸಲಾಗುತ್ತಿದೆ.
ಅತ್ಯಾಚಾರ, ಸರಣಿ ಕೊಲೆಯ ಪಾತಕಿ ಉಮೇಶ್ ರೆಡ್ಡಿ, ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಸಂಘಟನೆಯ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ, ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದ ಆರೋಪಿ ತರುಣ್ ರಾಜ್ ತಾವಿರುವ ಬ್ಯಾರಕ್‌ನಲ್ಲಿ ಮೊಬೈಲ್ ಹಿಡಿದು ಮಾತನಾಡುತ್ತಿರುವ, ಟಿ.ವಿ ವೀಕ್ಷಣೆ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗಷ್ಟೇ ಹರಿದಾಡಿದ್ದವು. ಅದರ ಬೆನ್ನಲ್ಲೇ, ಮಾಂಸ, ಮದ್ಯ ಸೇವಿಸಿ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳು ನೃತ್ಯ ಮಾಡುತ್ತಿರುವ ವಿಡಿಯೊವೊಂದು ಜಾಲತಾಣದಲ್ಲಿ ಹರಿದಾಡಿತ್ತು.
ಪ್ರಕರಣದ ತನಿಖೆಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರ ನೇತೃತ್ವದ ಉನ್ನತಮಟ್ಟದ ಸಮಿತಿ ರಚಿಸಲಾಗಿದ್ದು, ಸಮಿತಿ ತನಿಖೆ ಆರಂಭಿಸಿದೆ. ತನಿಖೆ ನಡೆಸಲು ಮುಂದಾದ ಪೊಲೀಸರಿಗೆ ಮತ್ತೊಂದು ವಿಡಿಯೊ ಲಭಿಸಿದ್ದು, ಜೈಲಿನ ಒಳಗೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಒಂದೊಂದೇ ಬಯಲಾಗುತ್ತಿವೆ.
‘ಒಂದು ತಂಡ ಕೊಳೆತ ಹಣ್ಣುಗಳನ್ನು ತರಿಸುತ್ತಿತ್ತು. ಮತ್ತೊಂದು ತಂಡವು, ಆ ಹಣ್ಣುಗಳನ್ನು ಬಳಸಿ ಮದ್ಯ ತಯಾರಿಸುತಿತ್ತು ಎಂದು ಹೇಳಲಾಗಿದೆ. ಈ ಹಣ್ಣುಗಳನ್ನು ಯಾರು ತಂದುಕೊಡುತ್ತಿದ್ದರು? ಯೀಸ್ಟ್ ಅನ್ನು ಯಾರು ಪೂರೈಸುತ್ತಿದ್ದರು ಎಂಬುದುರ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.
‘ಕಳ್ಳಬಟ್ಟಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿರುವ ಆರೋಪಿಗಳನ್ನು ಬಳಸಿಕೊಂಡು ನಶೆ ಏರಿಸುವ ಪದಾರ್ಥ ತಯಾರಿಕೆ ಮಾಡಲಾಗುತಿತ್ತು. ಪೊಲೀಸ್ ದಾಳಿ ವೇಳೆ ಕೈದಿಗಳ ಕೃತ್ಯ ಬಯಲಾಗಿದೆ. ಹೊಸ ವರ್ಷ, ಕೈದಿಗಳ ಜನ್ಮದಿನಾಚರಣೆಗೆಂದು ಈ ರೀತಿಯ ಮದ್ಯ ತಯಾರಿಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹಣ್ಣುಗಳನ್ನು 28 ದಿನ ಕೊಳೆಸಿ ಅಮಲು ಬರುವ ಉತ್ಪನ್ನ ತಯಾರಿಸಿಕೊಳ್ಳುತ್ತಿದ್ದರು’ ಎಂದು ಹೇಳಲಾಗಿದೆ.
ಕೊಳೆತ ಹಣ್ಣುಗಳಿಂದ ಬರುವ ರಸಕ್ಕೆ ಅಮಲು ಪದಾರ್ಥದ ಸೇರಿಸಿ, ಮದ್ಯದಂತೆ ಬಾಟಲಿಯಲ್ಲಿ ಶೇಖರಿಸಿರಿ ಇರಿಸಿಕೊಂಡಿರುವ ದೃಶ್ಯಗಳೂ ಇವೆ.
ವಿಡಿಯೊ ಇಟ್ಟುಕೊಂಡು ಬೆದರಿಕೆ
ಮದ್ಯ ಕುಡಿದು ನೃತ್ಯ ಮಾಡುವ ಹಾಗೂ ಮದ್ಯ ತಯಾರಿಸುವ ದೃಶ್ಯವನ್ನು ಕೈದಿಗಳೇ ಚಿತ್ರೀಕರಿಸಿ ಹೊರಗಿರುವ ತಮ್ಮ ಸಹಚರರಿಗೆ ಕಳುಹಿಸಿದ್ದರು. ಬ್ಯಾರಕ್‌ನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಯ ವಿಡಿಯೊವನ್ನು ಸಹಚರರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಾಕಿಸುವುದಾಗಿ ಜೈಲು ಅಧಿಕಾರಿಗಳಿಗೆ ಕೈದಿಗಳು ಬೆದರಿಕೆ ಹಾಕುತ್ತಿದ್ದರು ಎಂಬುದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.