ಬೆಂಗಳೂರು: ‘ಜಕ್ಕೂರು ಏರೋಡ್ರೋಮ್ ರನ್ ವೇ ವಿಸ್ತರಿಸಲು ಮತ್ತು ಈ ಜಾಗವನ್ನು ಸಂಪೂರ್ಣವಾಗಿ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು ಏನೇನು ಮಾಡಬಹುದೆಂಬ ಬಗ್ಗೆ ಚಿಂತನೆ ನಡೆಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಮತ್ತು ಏರೋಡ್ರೋಮ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಬುಧವಾರ ಅವರು ಚರ್ಚೆ ನಡೆಸಿದರು.
‘ಇಲ್ಲಿನ ಜಾಗವನ್ನು ಬಳಸಿಕೊಳ್ಳುವ ವಿಚಾರದಲ್ಲಿ ಸರ್ಕಾರದ ಮುಂದೆ ಎರಡು ಯೋಜನೆಗಳಿವೆ. ಇಲ್ಲಿ ಮೇಲ್ಸೇತುವೆ ಬಂದ ಕಾರಣ ಸಮಸ್ಯೆ ಆಗಿದೆ. ಮೇಲ್ಸೇತುವೆ ಬರುವ ಬಗ್ಗೆ ಮೊದಲೇ ತಿಳಿದಿರಲಿಲ್ಲ. ಇಲ್ಲಿ 200 ಎಕರೆಗಿಂತಲೂ ಹೆಚ್ಚಿನ ಜಾಗವಿದೆ. ಜಕ್ಕೂರು ವೈಮಾನಿಕ ತರಬೇತಿ ಶಾಲೆಯ ಪಕ್ಕದಲ್ಲಿಯೇ ರನ್ ವೇ ವಿಸ್ತರಣೆಗೆ ಮೂರು ಎಕರೆಗಿಂತ ಹೆಚ್ಚು ಜಮೀನಿನ ಅಗತ್ಯವಿದೆ. ಜಮೀನು ಕೊಡಲು ಭೂಮಾಲೀಕರು ತಯಾರಿಲ್ಲ. ಅಲ್ಲದೆ, ದುಬಾರಿ ಕೂಡಾ ಆಗಿದೆ’ ಎಂದರು.
‘ಲಭ್ಯ ಸ್ಥಳವನ್ನು ಹೇಗೆ ಉಪಯೋಗಿಸಬೇಕು ಎಂಬ ಬಗ್ಗೆ ಚಿಂತನೆ ನಡೆಯುತ್ತಿದೆ. ವೈಮಾನಿಕ ತರಬೇತಿ ಶಾಲೆ ನಡೆಸುವಂತೆ ಕೋರ್ಟ್ ಆದೇಶ ಇರುವುದರಿಂದ, ಏನೇನು ಮಾಡಬಹುದೆಂದು ಪರಿಶೀಲಿಸಲಾಗುತ್ತಿದೆ’ ಎಂದು ಮುಖ್ಯಮಂತ್ರಿ ತಿಳಿಸಿದರು.
ಸೌಜನ್ಯ ತಾಯಿ ನಿರ್ಧರಿಸಬೇಕು: ಸೌಜನ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೆ ಅದರ ವೆಚ್ಚವನ್ನು ಭರಿಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಆರೋಪಿಯನ್ನು ಈಗಾಗಲೇ ಸಿಬಿಐ ಖುಲಾಸೆ ಮಾಡಿದೆ. ಈಗ ಸುಪ್ರೀಂಕೋರ್ಟಿನ ವೆಚ್ಚ ಭರಿಸುವುದಾಗಿ ಹೇಳುತ್ತಿದ್ದಾರೆ. ಮೇಲ್ಮನವಿಗೆ ಪ್ರಕರಣ ಸೂಕ್ತವಾಗಿದೆಯೇ ಎಂಬುದನ್ನು ಸೌಜನ್ಯ ತಾಯಿ ನಿರ್ಧರಿಸಬೇಕು’ ಎಂದರು.
ರಾಜಕೀಯ ಪ್ರೇರಿತ ಯಾತ್ರೆ: ‘ಧರ್ಮಸ್ಥಳಕ್ಕೆ ಬಿಜೆಪಿ ಮಾಡಿದ ಯಾತ್ರೆ ರಾಜಕೀಯ ಪ್ರೇರಿತ. ಅದು ಧರ್ಮಸ್ಥಳ ಚಲೊ ಅಲ್ಲ, ರಾಜಕೀಯ ಚಲೊ’ ಎಂದರು.
ಧರ್ಮಪ್ರಚಾರ ಅಲ್ಲ: ಅರಮನೆ ಮೈದಾನದಲ್ಲಿ ಅಲ್ಪಸಂಖ್ಯಾತರ ಸಮಾವೇಶಕ್ಕೆ ವಿರೋಧ ವ್ಯಕ್ತವಾಗಿದ್ದು, ‘ಪ್ರವಾಸಿ ವೀಸಾ ಪಡೆದು ಧರ್ಮಪ್ರಚಾರ ಮಾಡುತ್ತಿದ್ದಾರೆ’ ಎಂಬ ಆರೋಪದ ಬಗ್ಗೆ, ‘ಆ ರೀತಿ ಏನೂ ಇಲ್ಲ. ಆಯೋಜಕರ ಜೊತೆ ಈ ಬಗ್ಗೆ ಮಾತನಾಡಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.