ADVERTISEMENT

ವಿಶ್ವ ಪರಿಸರ ದಿನಾಚರಣೆ: 30 ಲಕ್ಷ ಸಸಿ ನೆಡಲು ತೀರ್ಮಾನ

‘ಜಲಾಮೃತ– ಜಲವರ್ಷ ಅಭಿಯಾನ’

​ಪ್ರಜಾವಾಣಿ ವಾರ್ತೆ
Published 18 ಮೇ 2019, 20:02 IST
Last Updated 18 ಮೇ 2019, 20:02 IST
ಕೃಷ್ಣ ಭೈರೇಗೌಡ
ಕೃಷ್ಣ ಭೈರೇಗೌಡ   

ಬೆಂಗಳೂರು: ‘ವಿಶ್ವ ಪರಿಸರ ದಿನ (ಜೂನ್‌ 5) ಭಾಗವಾಗಿ ಜಲಾಮೃತ– ಜಲವರ್ಷ ಅಭಿಯಾನದ ಅಂಗವಾಗಿ ಜೂನ್ 11ರಂದು ಕನಿಷ್ಠ 30 ಲಕ್ಷ ಸಸಿಗಳನ್ನು ನೆಡಲು ತೀರ್ಮಾನಿಸಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ನಿರಂತರ ಬರಗಾಲ, ಮಳೆ ಕೊರತೆ ಹಿನ್ನೆಲೆಯಲ್ಲಿ ಜಲ ಸಂರಕ್ಷಣೆ ಮತ್ತು ಜಲ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿದೆ’ ಎಂದರು.

‘ಜನರು ನೀರಿನ ಮಹತ್ವ ಮತ್ತು ನೀರಿನ ಕೊರತೆ ಅರ್ಥ ಮಾಡಿಕೊಂಡು ಮನೆ ಮನೆಗಳಲ್ಲೂ ಮಳೆ ನೀರು ಸಂಗ್ರಹಣೆಗೆ ಒತ್ತು ನೀಡಬೇಕು. ಜಲ ಸಾಕ್ಷರತೆ, ಜಲ ಸಂರಕ್ಷಣೆ, ನೀರಿನ ಸದ್ಬಳಕೆ, ಹಸಿರೀಕರಣ ಆದ್ಯತೆಯಾಗಿದ್ದು ಜೂನ್ 11ರಂದು ಸಾರ್ವಜನಿಕರು, ಶಾಲಾ ಮಕ್ಕಳು, ಗ್ರಾ.ಪಂ ಸದಸ್ಯರನ್ನು ಸೇರಿಸಿ ಸಸಿ ನೆಡುವ ಆಂದೋಲನ ಹಮ್ಮಿಕೊಳ್ಳಲಾಗಿದೆ’ ಎಂದರು.

ADVERTISEMENT

‘ಎಲ್ಲ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವಿಡಿಯೊ ಸಂವಾದ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಮೂಲಕ ಸುಮಾರು 2 ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ಅರಣ್ಯ, ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಒಳಗೊಂಡ ಸ್ಥಳೀಯರ ಅನುಕೂಲಕ್ಕೆ ತಕ್ಕಂತೆ ಸಸಿ ನೀಡಲಾಗುವುದು.ಮಾವು, ಹಲಸು ಹಣ್ಣಿನ ಗಿಡಗಳಿಗೂ ಆದ್ಯತೆ ನೀಡಿದ್ದು ಸಸಿಗಳ ನಿರ್ವಹಣೆ ಹೊಣೆಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗುವುದು’ ಎಂದರು.

‘ಗ್ರಾಮೀಣ ಭಾಗದಲ್ಲೂ ಕಸ ಸಮಸ್ಯೆ ನಿವಾರಣೆಗೆ ಸ್ವಚ್ಛ ಮೇವ ಜಯತೆ ಜಾರಿಗೆ ತರಲಾಗಿದೆ. ಪ್ರಸಕ್ತ ವರ್ಷ 1 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ಸಂಸ್ಕರಣಾ ಘಟಕ ಆರಂಭಿಸಲಾಗುವುದು’ ಎಂದು ವಿವರಿಸಿದರು.

‘20 ಸಾವಿರ ಚೆಕ್ ಡ್ಯಾಂ ನಿರ್ಮಾಣ’

6,022 ಗ್ರಾಮ ಪಂಚಾಯಿತಿಗಳಲ್ಲೂ ಒಂದೇ ದಿನ ಜಲ ಜಾಗೃತಿ ಅಭಿಯಾನ ಆಯೋಜಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 500 ಗಿಡ ನೆಡಲು ಉದ್ದೇಶಿಸಲಾಗಿದೆ.

ಜಲಾಮೃತ ಯೋಜನೆಯಡಿ ಸುಮಾರು ₹ 500 ಕೋಟಿ ವೆಚ್ಚದಲ್ಲಿ 20 ಸಾವಿರ ಚಕ್ ಡ್ಯಾಂ, 14 ಸಾವಿರ ಸಣ್ಣಪುಟ್ಟ ಜಲತಾಣಗಳನ್ನು ಪುನರುಜ್ಜೀವನಗೊಳಿಸಲಾಗುವುದು. ಗ್ರಾಮೀಣ ವಿಕಾಸ್ ಯೋಜನೆಯಡಿ ಶೇ 1ರಷ್ಟು ಹಣವನ್ನು ಗಿಡ ನೆಡುವ ಯೋಜನೆಗೆ ಬಳಸಲು ಉದ್ದೇಶಿಸಲಾಗಿದೆ. ಜಲ ಸಾಕ್ಷರತೆಗೆ ಸಂಬಂಧಿಸಿದಂತೆ ಪ್ರತಿ ಶಾಲಾ-ಕಾಲೇಜು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂವಾದ ಏರ್ಪಡಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

**

ವಾಣಿಜ್ಯ ಕಟ್ಟಡಗಳಲ್ಲಿ ಗಿಡ ನೆಡುವುದನ್ನು ಕಡ್ಡಾಯಗೊಳಿಸಲಾಗುವುದು. ರಸ್ತೆ ನಿರ್ಮಿಸಿದವರೇ 3 ತಿಂಗಳು ಗಿಡ ಪೋಷಿಸಬೇಕು‌
- ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.