ADVERTISEMENT

‘ಇತಿಹಾಸ ಮರೆತ ವಿದ್ಯಾರ್ಥಿಗಳು’

‘ಜಲಿಯನ್‌ ವಾಲಾಬಾಗ್‌ ಶತಮಾನದ ಸ್ಮರಣೆ’

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 20:01 IST
Last Updated 18 ಜೂನ್ 2019, 20:01 IST
ಪ್ರೊ.ಎ.ಎಚ್‌.ರಾಮರಾವ್‌ ಮಾತನಾಡಿದರು. ಕೆ.ಎಸ್‌.ವಿಮಲಾ, ಎಚ್‌.ಆರ್‌.ಕೃಷ್ಣಮೂರ್ತಿ, ನವೀನ್‌ ಸಾಣೇಹಳ್ಳಿ ಇದ್ದರು   –ಪ್ರಜಾವಾಣಿ ಚಿತ್ರ
ಪ್ರೊ.ಎ.ಎಚ್‌.ರಾಮರಾವ್‌ ಮಾತನಾಡಿದರು. ಕೆ.ಎಸ್‌.ವಿಮಲಾ, ಎಚ್‌.ಆರ್‌.ಕೃಷ್ಣಮೂರ್ತಿ, ನವೀನ್‌ ಸಾಣೇಹಳ್ಳಿ ಇದ್ದರು   –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಇತಿಹಾಸದಲ್ಲಿ ನಡೆದ ಮಹಾ ಘಟನೆಗಳ ಬಗ್ಗೆಈಗಿನ ಯುವಜನಾಂಗಕ್ಕೆ ಅರಿವು ಕಡಿಮೆಯಾಗಿದೆ. ಇದನ್ನು ಮರೆಸುವ ಮೊಬೈಲ್‌ ಯುಗದಲ್ಲಿ ಅವರು ಜೀವಿಸುತ್ತಿದ್ದಾರೆ’ ಎಂದು ನ್ಯಾಷನಲ್‌ ಎಜುಕೇಷನ್‌ ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಎಚ್‌.ರಾಮರಾವ್‌ ಅಭಿಪ್ರಾಯಪಟ್ಟರು.

ಸಮುದಾಯ ಕರ್ನಾಟಕ ಹಾಗೂ ಯೂತ್‌ ಫಾರ್‌ ನೇಷನ್‌ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಜಲಿಯನ್‌ ವಾಲಾಬಾಗ್‌ ಶತಮಾನದ ಸ್ಮರಣೆ’ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇತಿಹಾಸದಲ್ಲಿ ನಡೆದ ದಾಳಿಗಳಲ್ಲಿ ಹಲವು ದೇಶಗಳು ನಾಶವಾಗಿ ಹೋಗಿವೆ. ಭಾರತದ ಮೇಲೂ ಹಲವರು ದಾಳಿ ನಡೆಸಿದ್ದಾರೆ. ಆದರೆ, ನಾವು ಎದೆಗುಂದದೇ ಅಭಿವೃದ್ಧಿಯತ್ತ ಮುಂಚೂಣಿಯಲ್ಲಿದ್ದೇವೆ. ಇಂತಹ ಇತಿಹಾಸದ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜ್ಞಾನ ಇರಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಸಮುದಾಯ ಕರ್ನಾಟಕ ಸಂಸ್ಥೆಯ ಸಹ ಕಾರ್ಯದರ್ಶಿ ಕೆ.ಎಸ್‌.ವಿಮಲಾ ಅವರು ಜಲಿಯನ್‌ ವಾಲಾಬಾಗ್‌ ದುರಂತದ ಬಗ್ಗೆ ವಿವರಿಸಿದರು.

‘1919ರಲ್ಲಿ ನಡೆದಿದ್ದಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ಘಟನೆಗೆ ಏಪ್ರಿಲ್ 13ಕ್ಕೆ ನೂರು ವರ್ಷ ತುಂಬಿದೆ. ಇದನ್ನು ನೆನಪಿಸುವ ಸಲುವಾಗಿ ನಗರದ ವಿವಿಧ ಕಾಲೇಜುಗಳಲ್ಲಿ ಕಿರುನಾಟಕ, ಕಿರುಚಿತ್ರ ಪ್ರದರ್ಶನ, ತಜ್ಞರಿಂದ ಚರ್ಚೆ, ವಿದ್ಯಾರ್ಥಿಗಳ ಜೊತೆ ಸಂವಾದಗಳನ್ನು ಏರ್ಪಡಿಸಲಾಗಿದೆ. ಗೌರಿಬಿದನೂರು ಬಳಿಯ ವಿಧುರಾಶ್ವತ್ಥದಿಂದ ಪಂಜಾಬ್‌ನ ಜಲಿಯನ್‌ ವಾಲಾಬಾಗ್‌ವರೆಗೆಜುಲೈ ತಿಂಗಳಿನಲ್ಲಿ ಬೈಕ್‌ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದರು.

ಸಮುದಾಯ ಕಲಾ ತಂಡದವರು ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡವನ್ನು ಸಾರುವ ‘ನತದೃಷ್ಟ ಗೋಡೆ’ ನಾಟಕ ಪ್ರದರ್ಶಿಸಿದರು.

ನ್ಯಾಷನಲ್‌ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ, ವಾಸುಕಿ ವೈಭವ್‌,ನಾಟಕ ನಿರ್ದೇಶಕ ನವೀನ್‌ ಸಾಣೇಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.