ADVERTISEMENT

ಜಮ್ಮು–ಕಾಶ್ಮೀರದ ಮೂವರ ಬಂಧನ

‘ಭಾರತೀಯ ಸೈನಿಕರೇ ಉಗ್ರಗಾಮಿಗಳು’ ಪೋಸ್ಟ್ * ಕಾಲೇಜು ಪ್ರಾಂಶುಪಾಲರಿಂದ ದೂರು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 19:38 IST
Last Updated 17 ಫೆಬ್ರುವರಿ 2019, 19:38 IST
ವಾಕರ್
ವಾಕರ್   

ಬೆಂಗಳೂರು: ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿ ಉಗ್ರನನ್ನೇ ಹೀರೊನಂತೆ ಬಿಂಬಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿ ದೇಶದ್ರೋಹವೆಸಗಿದ ಜಮ್ಮು–ಕಾಶ್ಮೀರದ ಮೂವರು ವಿದ್ಯಾರ್ಥಿಗಳನ್ನು ಸೂರ್ಯನಗರ ಪೊಲೀಸರು ಬಂಧಿಸಿದ್ದಾರೆ.

ವಾಕರ್ ಅಹಮದ್ ಅಲಿಯಾಸ್ ಹಾರೀಸ್ (19), ಗೌಹಾರ್ (19) ಹಾಗೂ ಜಾಕೀರ್ ಮಕ್‌ಬುಲ್ (19) ಬಂಧಿತರು. ಈ ಮೂವರು, ಆನೇಕಲ್ ತಾಲ್ಲೂಕಿನ ಮರಸೂರು ಗೇಟ್ ಬಳಿಯ ಸ್ಫೂರ್ತಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳು.

‘49 ಮಂದಿಯನ್ನು ಒಬ್ಬನೇ ಕೊಂದನಲ್ಲ ಆ ಉಗ್ರನೇ ನಿಜವಾದ ಹೀರೊ. ಭಾರತೀಯ ಸೇನೆ ಹಾಗೂ ಸೈನಿಕರೇ ಉಗ್ರಗಾಮಿಗಳು’ ಎಂದು ಆರೋಪಿಗಳು ಪೋಸ್ಟ್‌ ಪ್ರಕಟಿಸಿದ್ದರು. ಅದರ ವಿರುದ್ಧ ಕಾಲೇಜು ಪ್ರಾಂಶುಪಾಲ ಡಿ. ಬಾಬು ದೂರು ನೀಡಿದ್ದರು. ದೇಶದ್ರೋಹ, ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ ಅಡಿ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

ಸೇನೆ ಪರ ಪೋಸ್ಟ್‌ ಹಾಕಿದ್ದಕ್ಕೆ ಹಲ್ಲೆ: ‘ದಾಳಿಯಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರ ಸಮೇತ ಸೇನೆಯ ಪರವಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದ ಪಶ್ಚಿಮ ಬಂಗಾಳದ ವಿದ್ಯಾರ್ಥಿ ಕೌಶಿಕ್‌ ದೇಬನಾಥ್, ಉಗ್ರರ ಕೃತ್ಯವನ್ನು ಖಂಡಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಕೌಶಿಕ್ ಅವರ ಪೋಸ್ಟ್‌ ನೋಡಿ ಅವರನ್ನು ಪ್ರಶ್ನಿಸಿದ್ದ ಆರೋಪಿಗಳಾದ ವಾಕರ್ ಅಹಮದ್, ಗೌಹಾರ್ ಹಾಗೂ ಜಾಕೀರ್ ಮಕ್‌ಬುಲ್ ಹಲ್ಲೆ ಸಹ ಮಾಡಿದ್ದರು. ರಾಷ್ಟ್ರ ವಿರೋಧಿ ಘೋಷಣೆಗಳನ್ನೂ ಕೂಗಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.