ADVERTISEMENT

ಆಹಾರ ಪದ್ಧತಿ ಸೌಹಾರ್ದ ಹೆಚ್ಚಿಸಲಿ: ಚಿಂತಕ ರಂಗನಾಥ ಕಂಟನಕುಂಟೆ

ಜನ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 20:44 IST
Last Updated 8 ಜನವರಿ 2023, 20:44 IST
ಬೆಂಗಳೂರಿನಲ್ಲಿ ಭಾನುವಾರ ನಡೆದ ಜನಸಾಹಿತ್ಯ ಸಮ್ಮೇಳನದ ಆಹಾರ ಗೋಷ್ಠಿಯಲ್ಲಿ ರಂಗನಾಥ ಕಂಟನಕುಂಟೆ ಮತ್ತು ಪಲ್ಲವಿ ಇಡೂರ್ ಪಾಲ್ಗೊಂಡಿದ್ದರು -ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಭಾನುವಾರ ನಡೆದ ಜನಸಾಹಿತ್ಯ ಸಮ್ಮೇಳನದ ಆಹಾರ ಗೋಷ್ಠಿಯಲ್ಲಿ ರಂಗನಾಥ ಕಂಟನಕುಂಟೆ ಮತ್ತು ಪಲ್ಲವಿ ಇಡೂರ್ ಪಾಲ್ಗೊಂಡಿದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ‘ನಾವು ಮತ್ತು ಅವರು‘ ಎನ್ನುವ ವಿಭಜನೆ ವಿದ್ಯಾರ್ಥಿಗಳು, ಪೋಷಕರ ಮನದಲ್ಲಿ ಬಿತ್ತಲಾಗಿದೆ. ಇಡೀ ಸಮಾಜ ಧರ್ಮಾಧಾರಿತವಾಗಿಛಿದ್ರೀಕರಣಗೊಂಡಿದೆ. ಇದರ ಹಿಂದೆ ಮಾಂಸಾಹಾರದ ರಾಜಕಾರಣ ಅಡಗಿದೆ’ ಎಂದು ಚಿಂತಕ ರಂಗನಾಥ ಕಂಟನಕುಂಟೆ ಅವರು ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ನಡೆದ ಜನಸಾಹಿತ್ಯ ಸಮ್ಮೇಳನದಲ್ಲಿ ‘ಆಹಾರದ ಮೇಲಿನ ರಾಜಕಾರಣ ಮತ್ತು ದೌರ್ಜನ್ಯ‘ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಗೋವು ಸಾಗಣೆಯ ಮಾಹಿತಿ ನೀಡುವುದೇ ಶೂದ್ರ ಸಮುದಾಯದವರು ಎಂದರು.

‘ದನದ ಮಾಂಸ ಸಾಗಣೆ ಮತ್ತು ಸೇವಿಸುವ ವಿಚಾರದಲ್ಲಿ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ಆಹಾರ ಪದ್ಧತಿ ಅನುಸರಿಸಿ ಅವಮಾನಿಸುವ ಕೆಲಸವು ನಡೆಯುತ್ತಿದೆ. ಈಗ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದಿದೆ’ ಎಂದು ವಿಶ್ಲೇಷಿಸಿದರು.

ADVERTISEMENT

‘ಶೂದ್ರ ಸಮುದಾಯಗಳ ಆಚರಣೆಯಲ್ಲಿ ಮಾಂಸಾಹಾರವೇ ಪ್ರಧಾನ. ಗೋಹತ್ಯೆ ನಿಷೇಧ ಕಾನೂನು ಜಾರಿ ಮೂಲಕ ಈ ವೃತ್ತಿಯಲ್ಲಿ ತೊಡಗಿದರೆ ಅಪರಾಧಿಗಳಾಗಿಸುವ ಜನವಿರೋಧಿ ನಡೆ ಆಹಾರ ರಾಜಕಾರಣದ ಸುತ್ತ ನಡೆದಿದೆ’ ಎಂದರು.

‘ಸನಾತನ ಸಂಸ್ಕೃತಿ ಹೆಸರಿನಲ್ಲಿ ಸಸ್ಯಾಹಾರ ಪದ್ಧತಿ ಮುನ್ನೆಲೆಗೆ ತರುವ, ಇದೇ ಶ್ರೇಷ್ಠತೆ ಎಂದು ಸಾರುವ ವ್ಯಸನ ಬೆಳೆಯುತ್ತಿದೆ. ದನದ ಮಾಂಸ ತಿನ್ನುವವರ ವಿರುದ್ಧ ಕುರಿ ಮಾಂಸ ತಿನ್ನುವವರನ್ನು ಎತ್ತಿಕಟ್ಟುವ ಹುನ್ನಾರ ಇದರಲ್ಲಿದೆ. ಆಹಾರದ ಹೆಸರಿನ ಸಾಂಸ್ಕೃತಿಕ ಹಿಂಸೆ ಮನುಷ್ಯನನ್ನು ನಿರಂತರ ಗಾಯಗೊಳಿಸಲಿದೆ’ ಎಂದು ಹೇಳಿದರು.

ಲೇಖಕಿ ಪಲ್ಲವಿ ಇಡೂರ್ ಅವರು ಮಾತನಾಡಿ, ‘ಮನುಷ್ಯ ಮೂಲತಃ ಮಾಂಸಾಹಾರಿ. ಆಹಾರ ‍ಪದ್ಧತಿ ಹೆಸರಿನಲ್ಲಿ ಮೇಲು–ಕೀಳು, ಶ್ರೇಷ್ಠ–ಕನಿಷ್ಠ ಮನೋಧರ್ಮ ಬೆಳಸಲಾಗಿದೆ. ಆಹಾರ ಪದ್ಧತಿ ಮೂಲಕ ಭ್ರಾತೃತ್ವ, ಸೌಹಾರ್ದ ಹೆಚ್ಚಿಸಬೇಕು. ಒಡಕು ಮೂಡಿಸಬಾರದು’ ಎಂದರು. ಆಹಾರ ಸೇವಿಸುತ್ತಲೇ ಪ್ರೇಕ್ಷಕರು ಗೋಷ್ಠಿಗೆ ಕಿವಿಯಾದರು.

‘ಕವಿಯು ಕಾಲಕ್ಕೆ ಕೊರಳಾಗಬೇಕು’
‘ಕವಿಯಾದವನು ಕಾಲಕ್ಕೆ ಕೊರಳಾಗಬೇಕು, ಇಲ್ಲದಿದ್ದರೆ ಅದಷ್ಟೇ ಸುಂದರವಾದ ಕವಿತೆಯಾಗಿದ್ದರೂ ಕಾಲಾನಂತರದಲ್ಲಿ ಮರೆಯಾಗುತ್ತದೆ’ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರು ಹೇಳಿದರು.

ಜನಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ‘ರಾಜರ ಆಸ್ಥಾನದಲ್ಲಿ ಹೊಗಳಿ ಬರೆದ ಅದೆಷ್ಟೋ ಕವಿತೆಗಳು ಕಾಲದಲ್ಲಿ ಅಳಿಸಿ ಹೋಗಿವೆ. ಭಿಕ್ಷಾಟನೆ ಮಾಡಿಕೊಂಡು, ಕಾಡಿನಲ್ಲಿ ಅಲೆದಾಡಿ, ಜನರೊಂದಿಗೆ ಜಗಲಿಯ ಮೇಲೆ ಕುಳಿತ ಬರೆದ ಕವಿತೆಗಳು ಜನಮಾನಸದಲ್ಲಿ ಉಳಿದಿವೆ. ಕನಕದಾಸರು, ಷರೀಫರು, ಬಸವಣ್ಣನವರು ಯಾವುದೇ ರಾಜನನ್ನು ಮೆಚ್ಚಿಸಲು ಬರೆಯಲಿಲ್ಲ. ನೊಂದವರಿಗೆ ಧ್ವನಿಯಾಗಿ ಬರೆದರು. ಅದಕ್ಕಾಗಿಯೇ ಶಾಶ್ವತವಾಗಿ ಉಳಿದರು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.