ADVERTISEMENT

ಮುಖ್ಯಮಂತ್ರಿ ಮನೆಗೆ ಜನಾಗ್ರಹ ನಡಿಗೆ: ಮುಖಂಡರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 10:43 IST
Last Updated 15 ಜೂನ್ 2021, 10:43 IST
ಜನಾಗ್ರಹ ಆಂದೋಲನದಿಂದ ಮುಖ್ಯಮಂತ್ರಿ ಮನೆಗೆ ಜನಾಗ್ರಹ ನಡಿಗೆ ಹಮ್ಮಿಕೊಂಡಿದ್ದ ಸಂಘಟನೆಗಳ ಮುಖಂಡರು
ಜನಾಗ್ರಹ ಆಂದೋಲನದಿಂದ ಮುಖ್ಯಮಂತ್ರಿ ಮನೆಗೆ ಜನಾಗ್ರಹ ನಡಿಗೆ ಹಮ್ಮಿಕೊಂಡಿದ್ದ ಸಂಘಟನೆಗಳ ಮುಖಂಡರು   

ಬೆಂಗಳೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಸಮಗ್ರ ಪ್ಯಾಕೇಜ್‌ ನೀಡಲು ಒತ್ತಾಯಿಸಿ ಜನಾಗ್ರಹ ಆಂದೋಲನದಿಂದ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಮನೆಗೆ ಜನಾಗ್ರಹ ನಡಿಗೆಯಲ್ಲಿ ಪಾಲ್ಗೊಂಡಿದ್ದ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

ಮುಖಂಡರಾದ ಮಾವಳ್ಳಿ ಶಂಕರ್, ಕೋಡಿಹಳ್ಳಿ ಚಂದ್ರಶೇಖರ್, ವಕೀಲ ಎಸ್.ಬಾಲನ್, ವಿ.ನಾಗರಾಜ್, ಹಬೀಬುಲ್ಲಾ, ಕುಮಾರ್ ಸಮತಳ ಸೇರಿ 40ಕ್ಕೂ ಹೆಚ್ಚು ಮಂದಿಯನ್ನು ಹೈಗ್ರೌಂಡ ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು. ಬಳಿಕ ಜನಾಗ್ರಹ ಕಾರ್ಯಕರ್ತರು ಮೌರ್ಯ ವೃತ್ತದಲ್ಲೇ ಪ್ರತಿಭಟನೆ ಮುಂದುವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾವಳ್ಳಿ ಶಂಕರ್, ‘ಕೋವಿಡ್‌ನಿಂದ ಮೃತಪಟ್ಟ ಜನರು ಮತ್ತು ಮುಂಚೂಣಿ ಯೋಧರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತು ಕನಿಕರ ಇಲ್ಲ. ತಮ್ಮ ಕುರ್ಚಿ ಉಳಿಸಿಕೊಳ್ಳವ ಗಲಾಟೆಯಲ್ಲಿ ಆಳುವ ಪಕ್ಷದವರು ತೊಡಗಿದ್ದಾರೆ. ಸಂಕಷ್ಟದಲ್ಲಿರುವ ಬಡವರಿಗೆ ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಉತ್ತಮವಾದ ಪ್ಯಾಕೇಜ್ ಘೋಷಿಸಿವೆ. ಯಡಿಯೂರಪ್ಪ ಅವರು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ’ ಎಂದು ಟೀಕಿಸಿದರು.‌

ADVERTISEMENT

ಎಸ್‌ಡಿಪಿಐ ಮುಖಂಡರ ಅಪ್ಸರ್ ಕೊಡ್ಲಿಪೇಟೆ ಮಾತನಾಡಿ, ‘ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ನೀಡಬೇಕು. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಲು ಸಮಗ್ರ ಪ್ಯಾಕೇಜ್ ಘೋಷಿಸಬೇಕು. ಮುಂಗಾರು ಆರಂಭ ಆಗಿರುವ ಕಾರಣ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.