ADVERTISEMENT

ವೃಷಭಾವತಿ ಉಳಿಸಲು ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 17:01 IST
Last Updated 22 ಸೆಪ್ಟೆಂಬರ್ 2019, 17:01 IST
ಜಾಥಾದಲ್ಲಿ ಪಾಲ್ಗೊಂಡ ಜನರು
ಜಾಥಾದಲ್ಲಿ ಪಾಲ್ಗೊಂಡ ಜನರು   

ಕೆಂಗೇರಿ: 'ರನ್ ಫಾರ್ ವೃಷಭಾವತಿ ಜಾಗೃತಿ ಜಾಥಾ' ಕೆಂಗೇರಿ ಉಪನಗರದ ಗಣೇಶ ಆಟದ ಮೈದಾನದಿಂದ ಬೆಂಗಳೂರು ವಿಶ್ವವಿದ್ಯಾಲಯ ಅವರಣದವರೆಗೆ ಭಾನುವಾರ ನಡೆಯಿತು.

ರನ್ ಫಾರ್ ವೃಷಭಾವತಿ, ಸೋದರಿ ನಿವೇದಿತಾ ಪ್ರತಿಷ್ಠಾನ, ಶಕ್ತಿ ಕೇಂದ್ರ ಟ್ರಸ್ಟ್ ಹಾಗೂ ಯುವ ಬ್ರಿಗೇಡ್ ಆಶ್ರಯದಲ್ಲಿ ಆಯೋಜಿಸಿದ್ದ ಜಾಥಾದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಸ್ವಾಭಿಮಾನ ಮಹಿಳಾ ಟ್ರಸ್ಟ್, ರೋಟರಿ ಕ್ಲಬ್ ಕೆಂಗೇರಿ, ವಿಜಯನಗರ ಮಹಿಳಾ ಪರಿಸರ ರಕ್ಷಣಾ ಟ್ರಸ್ಟ್ ಸೇರಿದಂತೆ ಹಲವು ಸಂಘಟನೆಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಪರಿಸರಪ್ರೇಮಿಗಳು ಜಾಥಾಗೆ ಸಾಥ್ ನೀಡಿದರು. ತುಂತುರು ಮಳೆಯ ನಡುವೆಯೂ ಬಂದ ಪರಿಸರಪ್ರಿಯರು ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಗಣೇಶ ಆಟದ ಮೈದಾನದಿಂದ ಹೊರಟ ಜಾಥಾ ಕೆಂಗೇರಿ, ಮೈಲಸಂದ್ರ, ಆರ್.ವಿ.ಕಾಲೇಜು, ಜೈರಾಮ್ ದಾಸ್ ಸರ್ಕಲ್, ವಿಶ್ವವಿದ್ಯಾಲಯದ ಗೇಟ್ ಮುಖಾಂತರ ಸಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾವೇಶಗೊಂಡಿತು. ಕುಲಪತಿ ಅವರ ನಿವಾಸದ ಬಳಿ ಪರಿಸರ ಮಹತ್ವ ಕುರಿತ ಬೀದಿ ನಾಟಕ ಆಯೋಜಿಸಲಾಗಿತ್ತು.

ಸಂಸದ ತೇಜಸ್ವಿ ಸೂರ್ಯ, ‘ಬೆಂಗಳೂರಿನ ಹಲವು ಕಾರ್ಖಾನೆಗಳು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಹೊಂದಿಲ್ಲ. ಇದರಿಂದಾಗಿ, ಕೆರೆಗಳ ಜೀವಸೆಲೆಯೇ ಬತ್ತಿಹೋಗಿದೆ. ಇಂತಹ ಕಾಲಘಟ್ಟದಲ್ಲಿ ವೃಷಭಾವತಿಯ ಪುನಶ್ಚೇತನಕ್ಕೆ ಮುಂದಾಗಿರುವ ಸಂಘಟನೆಗಳ ಕಾರ್ಯ ಶ್ಲಾಘನೀಯ. ನದಿ ಪುನರುಜ್ಜೀವನ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ಸಹಕಾರ ನೀಡುತ್ತೇನೆ’ ಎಂದು ಭರವಸೆ ನೀಡಿದರು. ವೃಷಭಾವತಿ ಅಂಚಿನಲ್ಲಿರುವ ಕೈಗಾರಿಕೆಗಳು ಹಾಗೂ ಸಿದ್ಧ ಉಡುಪು ಕಾರ್ಖಾನೆಗಳು ತ್ಯಾಜ್ಯ ನೀರನ್ನು ಹರಿಸದಂತೆ ಸಕ್ಷಮ ಪ್ರಾಧಿಕಾರಗಳು ಕ್ರಮ ವಹಿಸಬೇಕು ಎಂದರು.

ADVERTISEMENT

‘ಪರಿಸರ ರಕ್ಷಣೆ ಸಾಮೂಹಿಕ ಜವಾಬ್ದಾರಿ. ಸರ್ಕಾರದೊಂದಿಗೆ ಸಾರ್ವಜನಿಕರು ಕೈ ಜೋಡಿಸಿದರೆ ಯೋಜನೆ ಯಶಸ್ವಿಯಾಗಲಿದೆ’ ಎಂದು ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ ಹೇಳಿದರು. ‘ಒಎನ್‌ಜಿಸಿಯೊಂದಿಗೆ ಮಾತುಕತೆ ನಡೆಸಲಾಗಿದೆ. ಕಣಿವೆಯ ಪುನಶ್ಚೇತನಕ್ಕೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ದೊರೆತಿದೆ’ ಎಂದು ವಿಶ್ವವಿದ್ಯಾಯಲದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಹೇಳಿದರು.

ಬರಹಗಾರ ಚಕ್ರವರ್ತಿ ಸೂಲಿಬೆಲೆ, ’ಮಳೆನೀರು ಹಾಗೂ ಒಳಚರಂಡಿ ನೀರು ಸಾಗಲು ಪ್ರತ್ಯೇಕ ವ್ಯವಸ್ಥೆಯಾದರೆ ಮೂರು ವರ್ಷಗಳಲ್ಲಿ ವೃಷಭಾವತಿಗೆ ಜೀವ ಕಳೆ ಬರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.