ADVERTISEMENT

‘ಮೆಟ್ರೊ ನಿಲ್ದಾಣ ಹೈಕೋರ್ಟ್‌ ನಿರ್ಧರಿಸುವುದಿಲ್ಲ’

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 22:19 IST
Last Updated 21 ಜನವರಿ 2020, 22:19 IST
‘ನಮ್ಮ ಮೆಟ್ರೊ’ ಕಾಮಗಾರಿಗಾಗಿ ನಗರದಲ್ಲಿ ಮಂಗಳವಾರ ರಾತ್ರಿ ಜಯದೇವ ಮೇಲ್ಸೇತುವೆ ನೆಲಸಮಗೊಳಿಸುವ ಕಾಮಗಾರಿ ನಡೆಯಿತು– ಪ್ರಜಾವಾಣಿ ಚಿತ್ರ 
‘ನಮ್ಮ ಮೆಟ್ರೊ’ ಕಾಮಗಾರಿಗಾಗಿ ನಗರದಲ್ಲಿ ಮಂಗಳವಾರ ರಾತ್ರಿ ಜಯದೇವ ಮೇಲ್ಸೇತುವೆ ನೆಲಸಮಗೊಳಿಸುವ ಕಾಮಗಾರಿ ನಡೆಯಿತು– ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ಮೆಟ್ರೊ ರೈಲು ನಿಲ್ದಾಣ ಎಲ್ಲಿರಬೇಕೆಂದು ಹೈಕೋರ್ಟ್ ನಿರ್ಧರಿಸಲು ಸಾಧ್ಯವಿಲ್ಲ. ಜನರು ತಮ್ಮ ಮನೆಯ ಬಳಿಯೇ ನಿಲ್ದಾಣ ಬರಬೇಕೆಂದು ಬಯಸುವುದು ಸಹಜ. ಆದರೆ, ಅದನ್ನು ನಿರ್ಧರಿಸುವ ತಾಂತ್ರಿಕ ನೈಪುಣ್ಯತೆ ನಮಗಿಲ್ಲ’ ಎಂದು ಹೈಕೋರ್ಟ್ ಹೇಳಿದೆ.

‘ಅಂಚೆಪಾಳ್ಯ ಬಳಿ ಮೆಟ್ರೊ ನಿಲ್ದಾಣ ನಿರ್ಮಾಣಕ್ಕೆ ನಿರ್ದೇಶಿಸುವಂತೆ ಕೋರಿ ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ ಸೂಕ್ತ ನಿರ್ಣಯ ಕೈಗೊಳ್ಳಿ’ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್‌ಸಿಎಲ್) ನಿರ್ದೇಶಿಸಿದೆ.

ಈ ಕುರಿತಂತೆ ಬಿ.ಕಿರಣ್, ಪ್ರಸನ್ನ ಕುಮಾರ್ ಸೇರಿದಂತೆ ಶ್ರೀಕಂಠಪುರ ಮತ್ತು ಅಂಚೆಪಾಳ್ಯದ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ವಿಲೇವಾರಿ ಮಾಡಿದೆ.

ADVERTISEMENT

‘ಮೊದಲಿಗೆ ಅಂಚೆಪಾಳ್ಯದ ಬಳಿ ಮೆಟ್ರೊ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿತ್ತು. ಆದರೆ, ಪ್ರೆಸ್ಟೀಜ್ ಜಿಂದಾಲ್ ಸಿಟಿಗೆ ಅನುಕೂಲ ಮಾಡಿಕೊಡಲು ನಿಲ್ದಾಣ ಸ್ಥಳಾಂತರಿಸಲಾಗುತ್ತಿದೆ’ ಎಂದು ಅರ್ಜಿದಾರರು ಆರೋಪಿಸಿದ್ದರು.

ಮೆಟ್ರೊ: ಮೇಲ್ಸೇತುವೆ ಧ್ವಂಸ ಕಾಮಗಾರಿ ಪ್ರಾರಂಭ
ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಕಾಮಗಾರಿಗಾಗಿ ಜಯದೇವ ಮೇಲ್ಸೇತುವೆ ನೆಲಸಮಗೊಳಿಸುವ ಕಾರ್ಯ ಸೋಮವಾರ ರಾತ್ರಿಯಿಂದಲೇ ಪ್ರಾರಂಭವಾಗಿದೆ. ಕಾರ್ಮಿಕರು ರಾತ್ರಿ 11 ಗಂಟೆಯ ನಂತರ ಕಾಮಗಾರಿ ಕೈಗೊಳ್ಳುತ್ತಿದ್ದಾರೆ.

ಈ ಮಾರ್ಗದಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಬಿಎಂಟಿಸಿ ಬಸ್‌ಗಳು, ಆಂಬುಲೆನ್ಸ್‌, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ನೆಲಸಮಗೊಳಿಸುವ ಕಾರ್ಯ ಆರಂಭಗೊಂಡ ನಂತರ ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.

ಹಗಲಿನ ವೇಳೆಯಲ್ಲಿ ಕಾರು, ಲಾರಿ ಮತ್ತಿತರ ವಾಹನಗಳ ಸಂಚಾರ ನಿಷೇಧಿಸಿರುವುದರಿಂದ ಜಯದೇವ ವೃತ್ತದ ಸುತ್ತ–ಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನಗಳ ದಟ್ಟಣೆ ನಿರ್ವಹಿಸಲು ಸಂಚಾರ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ನಿಯೋಜಿಸಲಾಗಿದೆ. ಅಲ್ಲದೆ, ಬೆಂಗಳೂರು ಮೆಟ್ರೊ ರೈಲು ನಿಗಮವು ಕೂಡ ಹೆಚ್ಚು ಕಾರ್ಮಿಕರನ್ನು ಇಲ್ಲಿ ನಿಯೋಜಿಸಿದ್ದು, ಸಂಚಾರ ದಟ್ಟಣೆ ನಿಯಂತ್ರಿಸಲು ಅವರೂ ಶ್ರಮ ಪಡುತ್ತಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.