ADVERTISEMENT

ಸುಶಿಕ್ಷಿತರಿಂದಲೇ ಭ್ರಷ್ಟಾಚಾರ ಹೆಚ್ಚು: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2023, 20:51 IST
Last Updated 23 ಏಪ್ರಿಲ್ 2023, 20:51 IST
ಬಸವ ಸಮಿತಿ ನೀಡುವ ‘ಕಾಯಕರತ್ನ ಪ್ರಶಸ್ತಿ’ಯನ್ನು ಉದ್ಯಮಿ ಜಯಂತ ಹುಂಬರವಾಡಿ ಅವರಿಗೆ ಪ್ರದಾನ ಮಾಡಲಾಯಿತು.
ಬಸವ ಸಮಿತಿ ನೀಡುವ ‘ಕಾಯಕರತ್ನ ಪ್ರಶಸ್ತಿ’ಯನ್ನು ಉದ್ಯಮಿ ಜಯಂತ ಹುಂಬರವಾಡಿ ಅವರಿಗೆ ಪ್ರದಾನ ಮಾಡಲಾಯಿತು.   ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪ್ರಸ್ತುತ ದಿನಗಳಲ್ಲಿ ವಿದ್ಯಾವಂತರಲ್ಲೇ ಭ್ರಷ್ಟಾಚಾರ ಮಿತಿ ಮೀರುತ್ತಿದ್ದು, ಶರಣರು ಇಂತಹ ಭ್ರಷ್ಟಾಚಾರದ ವಿರುದ್ಧ ಇದ್ದರು’ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬಸವ ಸಮಿತಿಯು ಬಸವ ಜಯಂತಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಬಸವ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದರೆ ಮತ್ತೊಮ್ಮೆ ಬಸವಣ್ಣನ ವಚನಗಳತ್ತ ಮುಖ ಮಾಡಬೇಕು. ಸಮಾಜದಲ್ಲಿ ಕಾಯಕ ಪ್ರಜ್ಞೆ ಮೂಡಿದಲ್ಲಿ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ ಎಂದು ಪ್ರತಿಪಾದಿಸಿದರು.

ADVERTISEMENT

ಸಮಾಜೋದ್ಧಾರಕ ಸಂಘಟಕರಾಗಿದ್ದ ಬಸವಣ್ಣ, ನುಡಿದಂತೆ ನಡೆದರು. ಬಸವಣ್ಣನ ವಿಚಾರಗಳ ಬಗ್ಗೆ ಇಂದು ಉದ್ದುದ್ದ ಭಾಷಣ ಮಾಡುವವರಿದ್ದಾರೆ. ಆದರೆ, ಅವರ ಆದರ್ಶ, ತತ್ವಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೇಲಿ ಮಹಾಸಂಸ್ಥಾನ ಮಠದ ಅಧ್ಯಕ್ಷ ಶಿವರುದ್ರಸ್ವಾಮೀಜಿ ಮಾತನಾಡಿ, ‘ಬಸವಣ್ಣನ ವಚನಗಳನ್ನು 36 ಭಾಷೆಗಳಿಗೆ ಭಾಷಾಂತರ ಮಾಡಿ ಇಡೀ ಪ್ರಪಂಚಕ್ಕೆ ತಲುಪಿಸುವ ಕೆಲಸವನ್ನು ಬಸವ ಸಮಿತಿ ಮಾಡಿದೆ’ ಎಂದರು.

ಉದ್ಯಮಿ ಜಯಂತ ಹುಂಬರವಾಡಿ ಅವರಿಗೆ ‘ಕಾಯಕರತ್ನ’ ಪ್ರಶಸ್ತಿ, 2023ರ ರಾಷ್ಟ್ರೀಯ ಬಸವ ಪುರಸ್ಕಾರವನ್ನು ವೀರಣ್ಣ ರಾಜೂರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ದಾಮೋದರ ಮೌಜೋ, ಸಾಹಿತಿ ಮೊಹಮ್ಮದ್ ಝಮಾನ್ ಅಜುರ್ದಾ  ಅವರಿಗೆ ‘ಬಸವ ವಿಭೂಷಣ’ ‍ಪ್ರಶಸ್ತಿ, ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ ಅವರಿಗೆ ‘ಬಸವ ಭೂಷಣ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೂಡಲ ಸಂಗಮದಲ್ಲಿ ನಿರ್ಮಾಣವಾಗುತ್ತಿರುವ ಅಂತರರಾಷ್ಟ್ರೀಯ ಮ್ಯೂಸಿಯಂ ಸ್ಥಾಪನೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ತಯಾರಿಸಿರುವ ವಿಸ್ತೃತ ಯೋಜನಾ ವರದಿಯನ್ನು ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ಶಿವಯೋಗಿ ಸಿ. ಕಳಸದ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.