ADVERTISEMENT

GBA ವ್ಯಾಪ್ತಿಯಲ್ಲಿ ಅನಧಿಕೃತವಾಗಿ ರಸ್ತೆ ಕತ್ತರಿಸುವವರಿಗೆ ದಂಡ: ಮಹೇಶ್ವರ್‌ ರಾವ್

ಪಣತ್ತೂರು ರಸ್ತೆಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಸ್ಥಳೀಯರ ವಿರೋಧ: ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 16:24 IST
Last Updated 19 ನವೆಂಬರ್ 2025, 16:24 IST
ಮಹೇಶ್ವರ್‌ ರಾವ್‌
ಮಹೇಶ್ವರ್‌ ರಾವ್‌   

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ರಸ್ತೆ ಕತ್ತರಿಸುವವರಿಗೆ ದಂಡ ವಿಧಿಸಬೇಕು ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಸ್ತೆ ಕತ್ತರಿಸುವಿಕೆಗೆ ಮಾರ್ಕ್ಸ್ ತಂತ್ರಾಂಶದ ಮೂಲಕ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ನಿಯಮಾನುಸಾರ ಏಕ ಗವಾಕ್ಷಿ ಪದ್ಧತಿಯಲ್ಲಿ ಅನುಮತಿ ನೀಡಬೇಕು ಎಂದರು.

ಆಯಾ ನಗರ ಪಾಲಿಕೆಗಳಲ್ಲಿ ಅನಧಿಕೃತವಾಗಿ ರಸ್ತೆ ಕತ್ತರಿಸುವುದು ಕಂಡುಬಂದರೆ ಅವರಿಗೆ ದಂಡ ವಿಧಿಸುವುದರ ಜೊತೆಗೆ ಶಿಸ್ತು ಕ್ರಮ ಕೈಗೊಳ್ಳಬೇಕು. ಅಲ್ಲದೆ, ತಮ್ಮಿಂದಲೇ ಕತ್ತರಿಸಿದ ಭಾಗವನ್ನು ದುರಸ್ತಿಪಡಿಸುವಂತೆ ನಿರ್ದೇಶಿಸಿದರು.

ADVERTISEMENT

ಆಸ್ತಿ ತೆರಿಗೆ ಸಂಗ್ರಹಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು, ಪರಿಷ್ಕರಣೆ ಪ್ರಕರಣಗಳು ಮತ್ತು ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿ ತೆರಿಗೆ ಸಂಗ್ರಹಣೆ ಹೆಚ್ಚಿಸಲು ಸೂಚಿಸಿದರು.

ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಬಂದಿರುವ ಅರ್ಜಿಗಳನ್ನು ಪಾಲಿಕೆವಾರು ಪರಿಶೀಲಿಸಿ, ನಿಯಮಾನುಸಾರ ಇತ್ಯರ್ಥಪಡಿಸಬೇಕು. ಜೊತೆಗೆ ಇ-ಖಾತಾ ಪಡೆಯಲು ಬಂದಿರುವ ಅರ್ಜಿಗಳನ್ನು ಕಾಲಮಿತಿಯೊಳಗಾಗಿ ವಿಲೇವಾರಿ ಮಾಡಲು ಹೇಳಿದರು.

ಟೋಯಿಂಗ್‌ ವಾಹನ:

ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಅನುಪಯುಕ್ತ ವಾಹನಗಳನ್ನು ಟೋಯಿಂಗ್ ಮಾಡಲು ತಕ್ಷಣ ಟೆಂಡರ್ ಕರೆದು ಯಂತ್ರಗಳನ್ನು ಖರೀದಿಸಬೇಕು. ಸಂಚಾರ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ, ಟೋಯಿಂಗ್ ಮಾಡುವ ವಾಹನಗಳಿಗಾಗಿ ಪಾಲಿಕೆವಾರು ನಿರ್ದಿಷ್ಟ ಸ್ಥಳ ಗುರುತಿಸಬೇಕು’ ಎಂದು ಮಹೇಶ್ವರ್‌ ರಾವ್‌ ತಿಳಿಸಿದರು.

ಪಣತ್ತೂರು ರಸ್ತೆಯ ದುರಸ್ತಿ ಕೆಲಸ ಪೂರ್ಣಗೊಂಡಿದ್ದು, ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪಾದಚಾರಿ ಮಾರ್ಗ ಇಲ್ಲದಿದ್ದರೆ ನಾಗರಿಕರು ರಸ್ತೆ ಮೇಲೆಯೇ ಸಂಚರಿಸಬೇಕಾಗುತ್ತದೆ. ಈ ವೇಳೆ ಅಪಘಾತ ಸಂಭವ ಹೆಚ್ಚಾಗುವ ಹಿನ್ನೆಲೆಯಲ್ಲಿ, ಪಾದಚಾರಿ ಮಾರ್ಗ ನಿರ್ಮಾಣವನ್ನು ಕೂಡಲೇ ಕೈಗೊಳ್ಳಬೇಕು ಮತ್ತು ಅಡಚಣೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.