ಬೆಂಗಳೂರು ಫುಟ್‌ಪಾತ್‌ಗಳು ಸ್ಕ್ವಿಡ್ ಗೇಮ್ ಸಿನಿಮಾಕ್ಕೆ ಹೋಲಿಕೆ
ಬೆಂಗಳೂರು: ನೆಟ್‌ಫ್ಲಿಕ್ಸ್‌ನ ಪ್ರಸಿದ್ಧ ಕೊರಿಯನ್ ವೆಬ್ ಸಿರೀಸ್ ಸ್ಕ್ವಿಡ್ ಗೇಮ್ ನ ಪರಿಕಲ್ಪನೆಯಂತೆ ಇತ್ತೀಚೆಗೆ ಕೆಲ ಕಲಾವಿದರು, ನಾಗರಿಕರು ಬೆಂಗಳೂರಿನ ಫುಟ್‌ಪಾತ್‌ಗಳ ಪರಿಸ್ಥಿತಿಯನ್ನು ಅಣುಕಿಸಿದ್ದರು. ಈ ವಿಡಿಯೊ ಸಾಕಷ್ಟು ಗಮನ ಸೆಳೆದಿತ್ತು. ಇದೇ ವಿಡಿಯೊ ಇಟ್ಟುಕೊಂಡು ಜೆಡಿಎಸ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಸಾವಿರಾರು ಕೋಟಿ ಅನುದಾನ ಪಡೆಯುತ್ತಿರುವ ಉಸ್ತುವಾರಿ ಸಚಿವ ಶಿವಕುಮಾರ್ ಅವರು, ರಾಜಧಾನಿಯನ್ನು ಹೇಗೆ ಅಭಿವೃದ್ಧಿ ಪಡಿಸಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ವಿಡಿಯೊ ಹಂಚಿಕೊಂಡಿದೆ.
ಗುಂಡಿ ಬಿದ್ದಿರುವ ರಸ್ತೆಗಳು, ಕಿತ್ತುಹೋಗಿರುವ ಪಾದಚಾರಿ ಮಾರ್ಗಗಳ ದುರಸ್ತಿ ವಿಷಯವಾಗಿ ಹೈಕೋರ್ಟ್ ಪದೇ ಪದೇ ಛೀಮಾರಿ ಹಾಕುತ್ತಿದ್ದರೂ ರಾಜ್ಯ ಸರ್ಕಾರ ಇನ್ನೂ ಬುದ್ಧಿ ಕಲಿತಿಲ್ಲ. ಕಾಮಗಾರಿ ಶೇ 10 ಆದ್ರೆ, ಬಿಲ್ ಶೇ 100 ! ಇದು ಕಾಂಗ್ರೆಸ್ ಸರ್ಕಾರದ ಲೂಟಿ ಯೋಜನೆಯಾಗಿದೆ. ಕಾಮಗಾರಿಗಳನ್ನು ಮಾಡದೆಯೇ ನಕಲಿ ಬಿಲ್‌ಗಳನ್ನು ಸೃಷ್ಟಿಸಿ, ಸಾವಿರಾರು ಕೋಟಿ ರೂ. ಕಬಳಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಭ್ರಷ್ಟಾಚಾರಿ ಕಾಂಗ್ರೆಸ್ ಸರ್ಕಾರದಲ್ಲಿ ಬೆಂಗಳೂರಿನ ಪಾದಚಾರಿ ಮಾರ್ಗಗಳ ಅವ್ಯವಸ್ಥೆಗೆ ಇದೊಂದು ನಿದರ್ಶನ ಎಂದು ಹೇಳಿದೆ.
ನೆಟ್‌ಫ್ಲಿಕ್ಸ್ ನಲ್ಲಿ ಎರಡು ಸೀಸನ್‌ಗಳಲ್ಲಿ ಲಭ್ಯವಿರುವ ಸ್ಕ್ವಿಡ್ ಗೇಮ್ ಒಂದು ಸರ್ವೈವಲ್ ಥ್ರಿಲ್ಲರ್ ವೆಬ್ ಸಿರೀಸ್ ಆಗಿದೆ. ಇದರಲ್ಲಿ ಸ್ಪರ್ಧಾಳುಗಳು ಗುರಿ ತಲುಪಲು ಭಾರಿ ಕಷ್ಟಪಡುವ ಕತೆ ತೋರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.