ಬೆಂಗಳೂರು: ರೈಲ್ವೆ ಪ್ರಯಾಣಿಕರ ಚಿನ್ನಾಭರಣ, ಮೊಬೈಲ್ ಹಾಗೂ ಟ್ಯಾಬ್ ಕಳವು ಮಾಡುತ್ತಿದ್ದ ಇಬ್ಬರು ರೈಲ್ವೆ ಸ್ವಚ್ಛತಾ ಸಿಬ್ಬಂದಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಯಶವಂತಪುರದ ಬಿ.ಕೆ ನಗರದ ಏಳನೇ ಕ್ರಾಸ್‌ನ ನಿವಾಸಿ ಸೈಯದ್ ಜಬಿ ಹಾಗೂ ಯಶವಂತಪುರ ಬಿ.ಕೆ ಕ್ರಾಸ್‌ನ ಯಲ್ಲಮ್ಮ ದೇವಸ್ಥಾನದ ಬಳಿಯ ನಿವಾಸಿ ವಿಜಯ್ ಕುಮಾರ್ ಬಂಧಿತರು.
‘ಸೈಯದ್ ಜಬಿ ಅವರ ಸ್ವಂತ ಊರು ಮೈಸೂರಿನ ಬಿಡಿ ಕಾಲೊನಿ. ವಿಜಯ್‌ಕುಮಾರ್ ಅವರದ್ದು ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯ ಕತೋನಿಯಾ ಗ್ರಾಮ. ಇಬ್ಬರೂ ಕಳೆದ ಐದು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ರೈಲ್ವೆ ಸ್ಛಚ್ಛತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ರೈಲ್ವೆ ಪೊಲೀಸರು ಹೇಳಿದರು.
‘ಬಂಧಿತರಿಂದ ₹21 ಲಕ್ಷ ಮೌಲ್ಯದ ವಿವಿಧ ಕಂಪನಿಯ 49 ಮೊಬೈಲ್‌ಗಳು, ಮೂರು ಟ್ಯಾಬ್, 153 ಗ್ರಾಂ ಚಿನ್ನಾಭರಣ, 825 ಗ್ರಾಂ ಬೆಳ್ಳಿ ಸಾಮಗ್ರಿ, ₹1.50 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಇವರ ಬಂಧನದಿಂದ ಏಳು ಪ್ರಕರಣಗಳು ಪತ್ತೆಯಾಗಿವೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಪ್ತಿ ಮಾಡಲಾದ 49 ಮೊಬೈಲ್‌ಗಳ ಮಾಲೀಕರನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ಆರೋಪಿಗಳಿಬ್ಬರು ಯಶವಂತಪುರ ನಿಲ್ದಾಣದಲ್ಲಿ ಮುಂಜಾನೆ ಬರುತ್ತಿದ್ದ ರೈಲುಗಳನ್ನು ಸ್ವಚ್ಛಗೊಳಿಸುವ ಹಾಗೂ ನೀರು ತುಂಬಿಸುವ ಕೆಲಸ ಮಾಡುತ್ತಿದ್ದರು. ನಿದ್ರೆಯಲ್ಲಿರುತ್ತಿದ್ದ ಪ್ರಯಾಣಿಕರ ನಗದು, ಚಿನ್ನಾಭರಣ ಹಾಗೂ ಚಾರ್ಜ್‌ಗೆ ಹಾಕಲಾಗಿದ್ದ ಮೊಬೈಲ್ ದೋಚುತ್ತಿದ್ದರು. ಪ್ರಯಾಣಿಕರೊಬ್ಬರು ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ರೈಲ್ವೆ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.