ADVERTISEMENT

ಲಾಕರ್‌ನಲ್ಲಿ ಇಟ್ಟಿದ್ದ ಆಭರಣ ಮಾಯ: SBI ಬ್ಯಾಂಕ್‌ ಮ್ಯಾನೇಜರ್‌ ವಿರುದ್ಧ ‌‌‌FIR

​ಪ್ರಜಾವಾಣಿ ವಾರ್ತೆ
Published 31 ಮೇ 2025, 23:30 IST
Last Updated 31 ಮೇ 2025, 23:30 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಬ್ಯಾಂಕ್‌ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮ್ಯಾನೇಜರ್‌ ಹಾಗೂ ಡೆಪ್ಯುಟಿ ಮ್ಯಾನೇಜರ್‌ ವಿರುದ್ಧ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಾರನಹಳ್ಳಿಯ ಡಾಲರ್ಸ್ ಕಾಲೊನಿಯ ಶಾಖೆಯ ಮ್ಯಾನೇಜರ್‌ ಕೆ.ಎಸ್‌.ಭಾರತೀಶ್, ಡೆಪ್ಯುಟಿ ಮ್ಯಾನೇಜರ್‌ ಫಿಲ್‌ಜಿತ್‌ ಜಾನ್‌ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.

ಚಿಕ್ಕಮಾರನಹಳ್ಳಿಯ ನಿವಾಸಿ ಸಿ.ಡಿ.ಬಿಂದು ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ಬಿಂದು ಅವರು ಎಸ್‌ಬಿಐ ಬ್ಯಾಂಕ್‌ನ ಡಾಲರ್ಸ್ ಕಾಲೊನಿಯ ಶಾಖೆಯಲ್ಲಿ 2022ರಿಂದ ಉಳಿತಾಯ ಖಾತೆ ಹೊಂದಿದ್ದರು. ಬ್ಯಾಂಕ್‌ನಲ್ಲಿ ಲಾಕರ್‌ ಪಡೆದು, ಅದರಲ್ಲಿ 145 ಗ್ರಾಂ ಚಿನ್ನಾಭರಣವನ್ನು ಇಟ್ಟಿದ್ದರು. 2024ರ ನವೆಂಬರ್ 21ರಂದು ಲಾಕರ್ ಪರಿಶೀಲಿಸಿದಾಗ ಚಿನ್ನಾಭರಣಗಳು ಇದ್ದವು. ಕಳೆದ ಮಾರ್ಚ್‌ 29ರಂದು ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ಆಭರಣಗಳು ನಾಪತ್ತೆ ಆಗಿದ್ದವು. ಈ ವಿಷಯವನ್ನು ಮ್ಯಾನೇಜರ್ ಹಾಗೂ ಡೆಪ್ಯುಟಿ ಮ್ಯಾನೇಜರ್‌ಗೆ ತಿಳಿಸಿದಾಗ ಅವರು ನಮಗೆ ವಿಷಯ ಗೊತ್ತಿಲ್ಲ ಎಂಬುದಾಗಿ ಹೇಳಿದ್ದರು. ನಂತರ, ಪ್ರಶ್ನೆ ಮಾಡಿದಾಗ ಬ್ಯಾಂಕ್‌ ಅಧಿಕಾರಿಗಳು ಆಭರಣ ಖರೀದಿಗೆ ಸಂಬಂಧಿಸಿದ ದಾಖಲೆ ತರುವಂತೆ ಹಾಗೂ ಆನ್‌ಲೈನ್‌ನಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದರು. ಅದಾದ ಮೇಲೆ ಎಸ್‌ಬಿಐ ಬ್ಯಾಂಕ್‌ ಗ್ರಾಹಕರ ಸೇವಾ ಕೇಂದ್ರ ಹಾಗೂ ವಿಚಕ್ಷಣಾದಳದ ಮುಖ್ಯ ಅಧಿಕಾರಿಗೆ ಬಿಂದು ದೂರು ಸಲ್ಲಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಗ್ರಾಹಕರ ಸೇವಾ ಕೇಂದ್ರಕ್ಕೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ನಂತರ, ಬಿಂದು ಅವರು ಡಿಸಿಪಿಗೆ ದಾಖಲೆ ಸಹಿತ ದೂರು ಸಲ್ಲಿಸಿದ್ದರು. ದೂರು ಆಧರಿಸಿ, ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.