ADVERTISEMENT

₹ 25 ಲಕ್ಷ ಸುಲಿಗೆ; ಮಾಜಿ ಪತ್ರಕರ್ತನಿಗೆ ಶೋಧ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:05 IST
Last Updated 25 ಏಪ್ರಿಲ್ 2019, 20:05 IST

ಬೆಂಗಳೂರು: ಟಿ.ವಿ–9 ಸುದ್ದಿ ವಾಹಿನಿಯ ಹೆಸರಿನಲ್ಲಿ ಟ್ರಸ್ಟ್‌ ವ್ಯವಸ್ಥಾಪಕರೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ ₹ 25 ಲಕ್ಷ ಸುಲಿಗೆ ಮಾಡಿದ್ದಲ್ಲದೆ, ಪ್ರೆಸ್‌ಕ್ಲಬ್‌ನ ಕೆಲ ಸದಸ್ಯರಿಗೆ ಪಾರ್ಟಿ ಕೊಡಿಸಬೇಕೆಂದು ಮತ್ತೆ ₹ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಮಾಜಿ ಪತ್ರಕರ್ತ ಕಿರಣ್ ಶಾನುಭಾಗ್ ಎಂಬಾತನವಿರುದ್ಧ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ದಾಖಲಾಗಿದೆ.

‘ಮೊದಲು ಖಾಸಗಿ ವಾಹಿನಿಯೊಂದರಲ್ಲಿ ವರದಿಗಾರನಾಗಿದ್ದ ಕಿರಣ್, ಈಗ ಎಲ್ಲೂ ಕೆಲಸ ಮಾಡುತ್ತಿರಲಿಲ್ಲ. ಎಫ್‌ಐಆರ್ ದಾಖಲಾದ ನಂತರ ಆರೋಪಿ ಮೊಬೈಲ್ ಸ್ವಿಚ್ಡ್‌ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ’ ಎಂದು ನೆಲಮಂಗಲ ಡಿವೈಎಸ್ಪಿ ಪಾಂಡುರಂಗ ‘ಪ್ರಜಾವಾಣಿ’ಗೆ ತಿಳಿಸಿದರು.

ಏನು ಆರೋಪ: ‘ನೆಲಮಂಗಲದ ಅರ್ಜುನ್‌ ಬೆಟ್ಟಹಳ್ಳಿಯಲ್ಲಿರುವ ಪರಿಪೂರ್ಣ ಚಾರಿಟಬಲ್ ಟ್ರಸ್ಟ್‌, ಆಯುರ್ವೇದ ವೈದ್ಯಕೀಯ ಕಾಲೇಜನ್ನೂ ನಡೆಸುತ್ತದೆ. ನಾನು ಆ ಟ್ರಸ್ಟ್‌ನಲ್ಲಿ ವ್ಯವಸ್ಥಾಪಕನಾಗಿದ್ದು, 2018ರ ನ.23ರಂದು ಕಾಲೇಜಿನ ಹೊಸ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಕಿರಣ್ ಶಾನುಭಾಗ್‌ನ ಪರಿಚಯವಾಗಿತ್ತು’ ಎಂದು ದೂರುದಾರ ಡಾ ಎ.ವಿ.ಶ್ರೀನಿವಾಸನ್ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಆನಂತರ ಟ್ರಸ್ಟ್‌ನ ಇನ್ನೊಬ್ಬ ಸದಸ್ಯ ಡಾ.ಸೀತಾರಾಮಯ್ಯ ಅವರನ್ನೂ ಭೇಟಿ ಮಾಡಿದ್ದ ಕಿರಣ್, ‘ಶ್ರೀನಿವಾಸ್ ಅವರ ಘನತೆಗೆ ಧಕ್ಕೆ ತರುವಂತಹ ವಿಡಿಯೊ ನನ್ನ ಬಳಿ ಇದೆ. ಅದರ ಪ್ರೋಮೊ ಕೂಡ ಸಿದ್ಧವಾಗಿದೆ. ₹ 25 ಲಕ್ಷ ಕೊಡದಿದ್ದರೆ ಟಿ.ವಿ-9 ವಾಹಿನಿಯಲ್ಲಿ ಸುದ್ದಿ ಬಿತ್ತರ ಮಾಡುತ್ತೇನೆ’ ಎಂದು ಬೆದರಿಸಿದ್ದ. ಸೀತಾರಾಮಯ್ಯ ಆ ವಿಚಾರವನ್ನು ನನಗೆ ತಿಳಿಸಿದ್ದರು.’

‘ಕಟ್ಟಡ ಕಟ್ಟಲು ಧನಸಹಾಯ ಮಾಡಿದ್ದ ವಿದೇಶಿಗರು, ಗಣ್ಯವ್ಯಕ್ತಿಗಳು ಆ ದಿನ ಕಾರ್ಯಕ್ರಮಕ್ಕೆ ಬಂದಿದ್ದರು. ಸುತ್ತ-ಮುತ್ತಲ ಗ್ರಾಮಸ್ಥರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಆ ಸಂದರ್ಭದಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿ, ಸಂಸ್ಥೆಗೆ ಕೆಟ್ಟ ಹೆಸರು ತಂದುಬಿಡಬಹುದು ಎಂಬ ಭಯದಲ್ಲಿ ಆ ದಿನವೇ ಕಿರಣ್‌ಗೆ ₹ 25 ಲಕ್ಷ ಕೊಟ್ಟು ಕಳುಹಿಸಿದ್ದೆ.’

‘ಅಂದಿನಿಂದ ಸುಮ್ಮನಿದ್ದ ಕಿರಣ್, ಈಗ ಪುನಃ ಸೀತಾರಾಮಯ್ಯ ಅವರಿಗೆ ಕರೆ ಮಾಡಿ ₹ 20 ಲಕ್ಷ ಕೊಡಿಸುವಂತೆ ಪೀಡಿಸು
ತ್ತಿದ್ದಾನೆ. ‘ಪ್ರೆಸ್‌ಕ್ಲಬ್‌ನ ಕೆಲ ಸದಸ್ಯರಿಗೆ ಪಾರ್ಟಿ ಕೊಡಿಸಲು ಹಣ ಬೇಕು. ಇಲ್ಲವಾದರೆ ಸುದ್ದಿ ಪ್ರಸಾರ ಮಾಡುತ್ತೇನೆ’ ಎಂದು ಬೆದರಿಸುತ್ತಿದ್ದಾನೆ. ಹೀಗಾಗಿ, ಆತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಶ್ರೀನಿವಾಸ್ ದೂರಿನಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.