ADVERTISEMENT

ಪಿಂಚಣಿಯ ಷರತ್ತು ಸಡಿಲಿಸಲು ಕ್ರಮ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್

ಹಿರಿಯ ಪತ್ರಕರ್ತರ ಸಮಾವೇಶದಲ್ಲಿ ಕೆ.ವಿ. ಪ್ರಭಾಕರ್ ಭರವಸೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 16:18 IST
Last Updated 23 ನವೆಂಬರ್ 2025, 16:18 IST
   

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿವೃತ್ತ ಪತ್ರಕರ್ತರ ಪಿಂಚಣಿಯನ್ನು ₹15 ಸಾವಿರಕ್ಕೆ ಹೆಚ್ಚಿಸಿದ್ದಾರೆ. ಪಿಂಚಣಿ ಪಡೆಯಲು ಇರುವ ಷರತ್ತುಗಳನ್ನು ಸಡಿಲಗೊಳಿಸಲಾಗುವುದು ಎಂದು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಭರವಸೆ ನೀಡಿದರು. 

ಭಾರತೀಯ ಹಿರಿಯ ಪತ್ರಕರ್ತರ ಒಕ್ಕೂಟ ಹಾಗೂ ಹಿರಿಯ ಪತ್ರಕರ್ತರ ವೇದಿಕೆ ಆಯೋಜಿಸಿದ್ದ ‘ಹಿರಿಯ ಪತ್ರಕರ್ತರ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

‘ರಾಜ್ಯದಲ್ಲಿ ಕೇವಲ 240 ಮಂದಿ ನಿವೃತ್ತ ಪತ್ರಕರ್ತರಿಗೆ ಪಿಂಚಣಿ ಸಿಗುತ್ತಿದೆ. ‌ನಿವೃತ್ತರಾದ ಎಲ್ಲ ಅರ್ಹ ಪತ್ರಕರ್ತರಿಗೆ ಪಿಂಚಣಿ ಸಿಗುವಂತೆ ಮಾಡಲು ಪ್ರಯತ್ನಿಸುತ್ತೇನೆ. ಮುಖ್ಯಮಂತ್ರಿಯವರ ಮಾಧ್ಯಮ ಸಂಜೀವಿನಿ ಯೋಜನೆಯನ್ನು ಹಿರಿಯ ಪತ್ರಕರ್ತರಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

‘ಊಹಾ ಪತ್ರಿಕೋದ್ಯಮ ಇಂದು ಆಳವಾಗಿ ತಲೆ ಎತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಪತ್ರಿಕೋದ್ಯಮದ ವಿಶ್ವಾಸಾರ್ಹತೆ ಕುಸಿಯಲಿದೆ. ಅಭಿವೃದ್ಧಿ ಹಾಗೂ ತನಿಖಾ ಪತ್ರಿಕೋದ್ಯಮ ಸತ್ತು ಹೋಗಿದೆ. ಈ ಹಿಂದೆ ತನಿಖಾ ವರದಿಗಳಿಂದ ಸರ್ಕಾರಗಳು ಬಿದ್ದು ಹೋಗಿರುವ ಹಾಗೂ ಸಚಿವರು ರಾಜೀನಾಮೆ ನೀಡಿರುವ ಹಲವು ನಿದರ್ಶನಗಳಿವೆ. ಆದರೆ, ಈಗ ಅಭಿವೃದ್ಧಿ ಹಾಗೂ ತನಿಖಾ ಪತ್ರಿಕೋದ್ಯಮಕ್ಕೆ ಜಾಗವಿಲ್ಲ. ರಾಜಕೀಯ ನಾಯಕರ ಹೇಳಿಕೆ ಆಧಾರಿತ ಸುದ್ದಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ರಾಜಕೀಯ ವಿಶ್ಲೇಷಣೆಗಳು, ಸಿನಿಮಾ ನಟ, ನಟಿಯರ ಸುದ್ದಿಗಳು ಹೆಚ್ಚಾಗಿವೆ’ ಎಂದು ತಿಳಿಸಿದರು.

ವೇದಿಕೆ ಅಧ್ಯಕ್ಷ ಆರ್.ಪಿ. ಸಾಂಬಸದಾಶಿವ ರೆಡ್ಡಿ, ಭಾರತೀಯ ಹಿರಿಯ ಪತ್ರಕರ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್.ಪಿ. ಚೆಕ್ಕುಟ್ಟಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ. ಸಿದ್ಧರಾಜು, ಆನಂದಮ್ ಪುಲಿಪಲುಪುಲ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.