
ಬೆಂಗಳೂರು: ‘ನಮ್ಮಲ್ಲಿ ಸಂವಿಧಾನದ ಕುರಿತು ಇನ್ನೂ ತಿಳಿವಳಿಕೆಯ ಕೊರತೆ ಇದೆ. ಪ್ರಜ್ಞಾವಂತರು ಹಾಗೂ ಪತ್ರಕರ್ತರು ಸಂವಿಧಾನ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಬೇಕು’ ಎಂದು ನಿವೃತ್ತ ನ್ಯಾ. ನಾಗಮೋಹನದಾಸ್ ಸಲಹೆ ನೀಡಿದರು.
ಕರ್ನಾಟಕ ಪತ್ರಕರ್ತೆಯರ ಸಂಘ ಗಾಂಧಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಶ್ರೀ ಸಿದ್ದರಾಮಯ್ಯ ದತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪತ್ರಿಕೋದ್ಯಮ ಪ್ರವೇಶಿಸುತ್ತಿರುವುದು ಒಳ್ಳೆಯ ಬೆಳೆವಣಿಗೆ. ಪ್ರತಿಭಾವಂತರ ಪ್ರಮಾಣ ಈ ಕ್ಷೇತ್ರದಲ್ಲಿ ಹೆಚ್ಚುತ್ತಿದ್ದು, ಹೊಸದಾಗಿ ಬರುವವರಿಗೆ ವೃತ್ತಿಪರತೆ, ನೈತಿಕತೆಯನ್ನು ಹಿರಿಯರು ಹೇಳಿಕೊಡಬೇಕಿದೆ. ಪತ್ರಿಕೋದ್ಯಮ ಎದುರಿಸುತ್ತಿರುವ ಬಿಕ್ಕಟ್ಟುಗಳ ಕುರಿತೂ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು’ ಎಂದರು.
‘ದೇಶದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದ್ದು, ಪ್ರಶ್ನಿಸಿದರೆ ದೇಶದ್ರೋಹಿ ಎಂದು ಬಿಂಬಿಸಿ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸುವ ಇಲ್ಲವೇ ಎನ್‌ಕೌಂಟರ್ ಮಾಡುವ ಹಂತಕ್ಕೂ ತಲುಪಿರುವುದು ಆತಂಕಕಾರಿ. ನಮ್ಮಲ್ಲಿ ವಾಕ್ ಸ್ವಾತಂತ್ರ್ಯದ ಸ್ವರೂಪ ಹೇಗಿರಬೇಕು ಎನ್ನುವ ಬಗ್ಗೆ ಚರ್ಚಿಸಬೇಕಾಗಿದೆ’ ಎಂದು ಹೇಳಿದರು.
‘ದೇಶದಲ್ಲಿ ನ್ಯಾಯಾಂಗ ಕ್ಷೇತ್ರದಲ್ಲಿನ ಕೆಲಸ, ತೀರ್ಪುಗಳನ್ನು ಪ್ರಶ್ನಿಸುವ, ವಿಮರ್ಶೆ ಮಾಡುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕಿದೆ. ವ್ಯವಸ್ಥೆಯನ್ನೇ ಧ್ವಂಸ ಮಾಡುವಂತ ಟೀಕೆ ಬೇಡ’ ಎಂದು ಸಲಹೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತೆ ಪುಷ್ಪಾ ಗಿರಿಮಾಜಿ, ‘ಎಐ ತಂತ್ರಜ್ಞಾನ ಈಗ ಮಾಧ್ಯಮ ವಲಯವನ್ನು ಆವರಿಸುತ್ತಿದೆ. ಡಿಜಿಟಲ್ ತಂತ್ರಜ್ಞಾನದಿಂದಲೂ ಸಾಕಷ್ಟು ಬದಲಾವಣೆಗಳು ಆಗಿವೆ. ಸುಳ್ಳು ಸುದ್ದಿಗಳು ವಿಜೃಂಭಿಸುತ್ತಿವೆ. ಇದರ ನಡುವೆಯೂ ನಿಜವಾದ ಪತ್ರಕರ್ತರು ತಮ್ಮತನವನ್ನು ಉಳಿಸಿಕೊಂಡು ವಸ್ತುಸ್ಥಿತಿಯ ಬಗ್ಗೆ ಬರೆಯಬೇಕು’ ಎಂದು ಕಿವಿಮಾತು ಹೇಳಿದರು.
ಪತ್ರಕರ್ತೆ ಆರ್.ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆರಳೆಣಿಕೆಯಷ್ಟಿದ್ದ ಪತ್ರಕರ್ತೆಯರ ಸಂಖ್ಯೆ ಈಗ ಹೆಚ್ಚಾಗಿದೆ. ಪತ್ರಕರ್ತೆಯರ ಪ್ರಮಾಣ ಹೆಚ್ಚಾದಷ್ಟೂ ಆತ್ಮವಂಚನೆಯ ಪ್ರಮಾಣ ತಗ್ಗಿ ಅಂತಃಕರಣದಿಂದ ವಿದ್ಯಮಾನ ನೋಡುವ ಪ್ರಮಾಣ ಹೆಚ್ಚಾಗಲಿದೆಕೆ.ವಿ. ಪ್ರಭಾಕರ್ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.