ADVERTISEMENT

ಗೋಡೆ ಕೊರೆದು ಚಿನ್ನಾಭರಣ ಕಳವು: 10 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 21 ಮೇ 2022, 19:56 IST
Last Updated 21 ಮೇ 2022, 19:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಜೆ.ಪಿ.ನಗರ ಠಾಣೆ ವ್ಯಾಪ್ತಿಯಲ್ಲಿರುವ ಪ್ರಿಯದರ್ಶಿನಿ ಮಳಿಗೆಯ ಗೋಡೆ ಕೊರೆದು ಚಿನ್ನಾಭರಣ ಕದ್ದೊಯ್ದಿದ್ದ ಆರೋಪದಡಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ಜಾರ್ಖಂಡ್‌ನ ಆದಿಲ್ ಮನರುಲ್ಲಾ ಹುಕ್, ಸುಲೇಮಾನ್ ಶೇಖ್, ಅಜೀಜುರ್ ರೆಹಮಾನ್, ರಮೇಶ್ ಬಿಷ್ಠ, ಸದ್ದಾಂ, ಮನರುಲ್ ಶೇಖ್, ಸಲೀಂ ಶೇಖ್, ಸೈಫುದ್ದೀನ್ ಶೇಖ್, ಅನಾರುಲ್ಲಾ ಶೇಖ್ ಹಾಗೂ ಮಹಿಳೆ ಶೈನೂರ್ ಬೇಬಿ ಬಂಧಿತರು. ಇವರಿಂದ ₹55 ಲಕ್ಷ ಮೌಲ್ಯದ 1 ಕೆ.ಜಿ 100 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೆಲ ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ ಆರೋಪಿಗಳು, ಪ್ರಿಯದರ್ಶಿನಿ ಮಳಿಗೆ ಕಟ್ಟಡಕ್ಕೆ ಹೊಂದಿಕೊಂಡಿರುವ ಮನೆಯಲ್ಲಿ ಬಾಡಿಗೆಗೆ ಇದ್ದರು. ಮಳಿಗೆ ಮೇಲೆ ಕಣ್ಣಿಟ್ಟು, ಅಲ್ಲಿ ನಡೆಯುವ ವ್ಯವಹಾರ ಹಾಗೂ ಕೆಲಸಗಾರರ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದರು.’

ADVERTISEMENT

‘ನಿತ್ಯವೂ ವ್ಯಾಪಾರ ಮುಗಿದ ಬಳಿಕ ಮಾಲೀಕರು, ಲಾಕರ್‌ನಲ್ಲಿ ಚಿನ್ನಾಭರಣ ಇರಿಸಿ ಮಳಿಗೆಗೆ ಬೀಗ ಹಾಕಿಕೊಂಡು ಮನೆಗೆ ಹೋಗುತ್ತಿದ್ದರು. ಈ ಬಗ್ಗೆ ತಿಳಿದುಕೊಂಡಿದ್ದ ಆರೋಪಿಗಳು, ಕಳ್ಳತನ ಮಾಡಲು ಸಂಚು ರೂಪಿಸಿದ್ದರು’ ಎಂದೂ ತಿಳಿಸಿದರು.

ಗೋಡೆ ಕೊರೆದು ಕೃತ್ಯ: ‘ಏಪ್ರಿಲ್ 17ರಂದು ತಡರಾತ್ರಿ ಗೋಡೆ ಕೊರೆದು ಮಳಿಗೆಯೊಳಗೆ ಆರೋಪಿಗಳು ನುಗ್ಗಿದ್ದರು. ಗ್ಯಾಸ್‌ ಕಟರ್‌ನಿಂದ ಲಾಕರ್‌ ಕತ್ತರಿಸಿ, ₹ 2.50 ಕೋಟಿ ಮೌಲ್ಯದ 5 ಕೆ.ಜಿ ಚಿನ್ನಾಭರಣ ಕದ್ದೊಯ್ದಿದ್ದರು. ಈ ಬಗ್ಗೆ ಮಾಲೀಕರು ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಕದ್ದ ಆಭರಣಗಳನ್ನು ಮಾರಿರುವ ಆರೋಪಿಗಳು, ಬಂದ ಹಣವನ್ನು ಹಂಚಿಕೊಂಡಿದ್ದಾರೆ. ಸದ್ಯ 1 ಕೆ.ಜಿ 100 ಗ್ರಾಂ ಚಿನ್ನಾಭರಣ ಮಾತ್ರ ಸಿಕ್ಕಿದ್ದು, ಉಳಿದ ಆಭರಣ ಪತ್ತೆ ಮಾಡಬೇಕಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.