ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಮತ್ತು ಉಷಾ ಗೋಪಾಲಗೌಡ ಅವರನ್ನು ಗೌರವಿಸಲಾಯಿತು. ಎ.ಕೆ. ಪಟ್ನಾಯಕ್, ಎನ್. ಸಂತೋಷ್ ಹೆಗ್ಡೆ, ಪವನ್ ಕಲ್ಯಾಣ್, ಎಂ.ಎನ್. ಶೇಷಾದ್ರಿ, ಎಚ್.ಕೆ. ಪಾಟೀಲ ಇದ್ದಾರೆ.
ಪ್ರಜಾವಾಣಿ ಚಿತ್ರ.
ಬೆಂಗಳೂರು: ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಬದ್ಧತೆ ಮೂಲಕ ಜೀವನದಲ್ಲಿ ಉನ್ನತ ಸ್ಥಾನಕ್ಕೇರಿದ ವಿ.ಗೋಪಾಲಗೌಡ ಅವರ ಸಾಧನೆ ಇತರರಿಗೆ ಮಾದರಿಯಾಗಿದೆ ಎಂದು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿ.ಗೋಪಾಲಗೌಡ ಅಭಿನಂದನಾ ಸಮಿತಿ ಸೋಮವಾರ ಆಯೋಜಿಸಿದ್ದ ವಿ.ಗೋಪಾಲಗೌಡ–75 ಅಭಿನಂದನೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
‘ವಕೀಲರಾಗಿ, ಹೈಕೋರ್ಟ್ ನ್ಯಾಯಮೂರ್ತಿಯಾಗಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿರುವ ಅವರು, ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದಾರೆ. ಅವರು ಸ್ಫೂರ್ತಿದಾಯಕ ವ್ಯಕ್ತಿ ಮಾತ್ರವಲ್ಲ, ನನಗೆ ಮಾರ್ಗದರ್ಶಕರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆಗಿದ್ದಾಗ ಹಲವು ವ್ಯಾಜ್ಯಗಳನ್ನು ಇತ್ಯರ್ಥಪಡಿಸಿ, ಉತ್ತಮ ತೀರ್ಪು ನೀಡಿದ್ದಾರೆ. ಅಳವಾಗಿ ಕಾನೂನು ಅಧ್ಯಯನ ಮಾಡಿರುವ ಅವರು, ಸಂವಿಧಾನದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ’ ಎಂದರು.
ಕಾನೂನು ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ‘ನನ್ನ ಮತ್ತು ಗೋಪಾಲಗೌಡರ ಜತೆಗಿನ ಸಂಬಂಧ 30 ವರ್ಷ ಹಳೆಯದು. ನಿವೃತ್ತಿ ಬಳಿಕವೂ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದು, ಬಡವರ ಮೇಲಿನ ಕಾಳಜಿ ಎಳ್ಳಷ್ಟೂ ಬದಲಾಗಿಲ್ಲ. ನ್ಯಾಯದಾನ ವ್ಯವಸ್ಥೆಯಲ್ಲಿನ ಲೋಪಗಳನ್ನು ತಿಳಿಸಿದ್ದಾರೆ. ದೇಶ ಸೇವೆಯನ್ನು ಮತ್ತಷ್ಟು ಮುಂದುವರಿಸಲಿ’ ಎಂದರು.
ಅಭಿನಂದನಾ ನುಡಿಗಳಾಡಿದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ‘ಗೋಪಾಲಗೌಡ ಅವರು ಯಾವುದೇ ಒತ್ತಡ, ಪ್ರಭಾವಕ್ಕೆ ಒಳಗಾಗದೇ ತೀರ್ಪುಗಳನ್ನು ನೀಡಿದ್ದಾರೆ. ಸಾಮಾಜಿಕ ಬದ್ಧತೆವುಳ್ಳವರಾಗಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಬಣ್ಣಿಸಿದರು.
ನಿವೃತ್ತ ನ್ಯಾಯಮೂರ್ತಿಎಂ.ಎನ್.ವೆಂಕಟಾಚಲಯ್ಯ ಅವರು ವರ್ಚುವಲ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್, ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕ ವೈ.ಎ.ನಾರಾಯಣಸ್ವಾಮಿ ಮಾತನಾಡಿದರು. ವಕೀಲ ಎಂ.ಎನ್.ಶೇಷಾದ್ರಿ ಅಧ್ಯಕ್ಷತೆ ವಹಿಸಿದ್ದರು.
ವಿಶ್ರಾಂತ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರರಾವ್, ಪುಸ್ತಕದ ಸಂಪಾದಕ ಸಂತೇಬಾಚಹಳ್ಳಿ ಡಾ.ಎಸ್.ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಎನ್.ಪಿಳ್ಳಪ್ಪ ಹಾಜರಿದ್ದರು. ನಿವೃತ್ತ ನ್ಯಾಯಾಧೀಶೆ ಶಶಿಕಲಾ ಉರಂಕರ್ ಸ್ವಾಗತಿಸಿದರು. ಇದೇ ವೇಳೆ ಮಾನವತಾವಾದಿ ನ್ಯಾಯಮೂರ್ತಿ ವಿ.ಗೋಪಾಲಗೌಡರ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.
‘ನ್ಯಾಯಮೂರ್ತಿ ಆಗಿದ್ದಾಗ ಮತ್ತು ನಿವೃತ್ತಿ ಬಳಿಕವೂ ನಿತ್ಯ 18 ತಾಸು ಕೆಲಸ ಮಾಡುತ್ತೇನೆ. ಬದುಕಿರುವವರೆಗೂ ಜನಪರ ಹೋರಾಟದಲ್ಲಿ ತೊಡಗಿರುತ್ತೇನೆ’ ಎಂದು ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದರು. ಅಭಿನಂದನೆ ಸ್ವೀಕರಿಸಿದ ಮಾತನಾಡಿದ ಅವರು ‘ಬಡ ರೈತ ಕುಟುಂಬದಲ್ಲಿ ಜನಿಸಿ ಕಷ್ಟಪಟ್ಟು ಶಿಕ್ಷಣ ಕಲಿತೆ. ಗ್ರಾಮೀಣ ಪ್ರದೇಶದಲ್ಲಿ ಹಿಮಾಲಯ ಪರ್ವತದಷ್ಟೇ ಸಮಸ್ಯೆ ಇದೆ. ನ್ಯಾಯಮೂರ್ತಿಯಾದ ಕೆಲವೇ ದಿನಗಳಲ್ಲಿ ರಾಜೀನಾಮೆಗೆ ಮುಂದಾಗಿದ್ದೆ. ಹಲವರ ಸಲಹೆ ಮೇರೆಗೆ ನನ್ನ ನಿರ್ಧಾರ ಬದಲಿಸಿದೆ’ ಎಂದರು. ‘ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ಕಷ್ಟಕ್ಕೆ ಸಿಲುಕಿಸಿದಾಗ ಸಂತೋಷ್ ಹೆಗ್ಡೆ ಅವರು ನೆರವಿಗೆ ಬಂದರು. ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ನನ್ನ ಬಗ್ಗೆ ಸತ್ಯಾಂಶ ತಿಳಿಸಿ ವರ್ಗಾವಣೆ ಮಾಡದಂತೆ ಬೆಂಬಲಕ್ಕೆ ನಿಂತರು. ಇದನ್ನು ಮರೆಯಲು ಸಾಧ್ಯವಿಲ್ಲ’ ಎಂದು ನೆನಪಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.