ADVERTISEMENT

ಬಸವನಗುಡಿಯಲ್ಲಿ ದೊಡ್ಡ ಬಸವನಿಗೆ 500 KG ಕಡಲೆಕಾಯಿ ಅಭಿಷೇಕ; ಜನಜಾತ್ರೆಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 15:59 IST
Last Updated 25 ನವೆಂಬರ್ 2024, 15:59 IST
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬಸವಣ್ಣನ ವಿಗ್ರಹಕ್ಕೆ ಕಡಲೆಕಾಯಿಯಿಂದ ತುಲಾಭಾರ ಮಾಡುವ ಮೂಲಕ ಕಡಲೆಕಾಯಿ ಪರಿಷೆಗೆ ಸೋಮವಾರ ಚಾಲನೆ ನೀಡಿದರು. ಶಾಸಕರಾದ ಗರುಡಾಚಾರ್‌, ಸಿ.ಕೆ. ರಾಮಮೂರ್ತಿ, ಯು.ಬಿ. ವೆಂಕಟೇಶ್‌, ರವಿ ಸುಬ್ರಮಣ್ಯ, ಟಿ.ಎ. ಶರವಣ ಉಪಸ್ಥಿತರಿದ್ದರು
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬಸವಣ್ಣನ ವಿಗ್ರಹಕ್ಕೆ ಕಡಲೆಕಾಯಿಯಿಂದ ತುಲಾಭಾರ ಮಾಡುವ ಮೂಲಕ ಕಡಲೆಕಾಯಿ ಪರಿಷೆಗೆ ಸೋಮವಾರ ಚಾಲನೆ ನೀಡಿದರು. ಶಾಸಕರಾದ ಗರುಡಾಚಾರ್‌, ಸಿ.ಕೆ. ರಾಮಮೂರ್ತಿ, ಯು.ಬಿ. ವೆಂಕಟೇಶ್‌, ರವಿ ಸುಬ್ರಮಣ್ಯ, ಟಿ.ಎ. ಶರವಣ ಉಪಸ್ಥಿತರಿದ್ದರು   

ಬೆಂಗಳೂರು: ಕಾರ್ತೀಕ ಮಾಸದ ಕೊನೆಯ ಸೋಮವಾರ ಬನವನಗುಡಿಯ ದೊಡ್ಡ ಬಸವಣ್ಣನಿಗೆ ಪುಷ್ಪಾಲಂಕಾರದ ಜೊತೆಗೆ ಕಡಲೆಕಾಯಿ ಅಭಿಷೇಕ ಹಾಗೂ ನೈವೇದ್ಯದ ವೈಭವ ಒಂದೆಡೆಯಾದರೆ, ಮತ್ತೊಂದೆಡೆ ನಾಗರಿಕರು ಹತ್ತಾರು ರೀತಿಯ ಕಡಲೆಕಾಯಿಗಳನ್ನು ಖರೀದಿಸುವ, ಸವಿಯುವ ಸಂಭ್ರಮದಲ್ಲಿದ್ದರು.

ಸುಂಕೇನಹಳ್ಳಿಯಲ್ಲಿ ಪ್ರತಿ ವರ್ಷ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಯ ಸೊಬಗು ಶುಕ್ರವಾರದಿಂದಲೇ ಆರಂಭವಾಗಿದ್ದರೂ, ಸೋಮವಾರ ಅದಕ್ಕೆ ಅಧಿಕೃತ ಚಾಲನೆ ದೊರಕಿತು. ಬಸವನಗುಡಿ ರಸ್ತೆಯನ್ನು ನಾಲ್ಕು ಭಾಗಗಳಾಗಿ ಮಾಡಿ, ಅಷ್ಟೂ ಬದಿಯಲ್ಲಿ ಕಡಲೆಕಾಯಿ ಸೇರಿದಂತೆ ವ್ಯಾಪಾರಿಗಳು ಹಲವು ರೀತಿಯ ವಸ್ತು, ತಿನಿಸುಗಳನ್ನು ಮಾರಾಟ ಮಾಡಿದರು.

ರಾಮಕೃಷ್ಣ ಆಶ್ರಮದಿಂದ ತ್ಯಾಗರಾಜನಗರ ಮುಖ್ಯರಸ್ತೆಯವರೆಗೂ ಗುರುವಾರ ಸಂಜೆಯಿಂದಲೇ ಕಡಲೆಕಾಯಿ ಹಾಗೂ ಆಟಿಕೆ, ತಿನಿಸುಗಳ ಮಳಿಗೆ ಆರಂಭವಾಗಿದ್ದವು. ವಾರಾಂತ್ಯದಲ್ಲಿ ಮಳಿಗೆ ಹಾಗೂ ಜನರ ಜಾತ್ರೆಯೂ ಹೆಚ್ಚಾಯಿತು. ಸೋಮವಾರ ಬೆಳಿಗ್ಗೆ ಪರಿಷೆಗೆ ಚಾಲನೆ ಸಿಕ್ಕಮೇಲೆ ಸಂಭ್ರಮ ಮತ್ತಷ್ಟು ಹೆಚ್ಚಾಗಿತ್ತು. ಕಡಲೆಕಾಯಿ ಖರೀದಿಗೆ ಆದ್ಯತೆ ಇದ್ದರೂ, ಬೇಲ್‌, ಬಜ್ಜಿ, ಮಸಾಲ ಹಪ್ಪಳ, ಆಲೂ ಟ್ವಿಸ್ಟರ್‌... ಪ್ರಮುಖ ತಿನಿಸುಗಳಾಗಿ ಮನಸೆಳೆದವು. ರಾಕ್ಷಸನ ಬೆಳಕಿನ ಕೊಂಬುಗಳು, ಏಂಜಲ್‌ ಕಿರೀಟ, ವಿವಿಧ ಪೀಪಿಗಳು, ಬಲೂನ್‌ಗಳು ಮಕ್ಕಳನ್ನು ಆಕರ್ಷಿಸಿದವು. ಬೊಂಬೆ ಮಿಠಾಯಿಯಿಂದ ಕೈಗೆ ವಾಚು, ಬೆರಳಿಗೆ ಉಂಗುರುವನ್ನು ಮಕ್ಕಳಿಗೆ ತೊಡಿಸಿ ಪೋಷಕರು ಸಂಭ್ರಮಿಸಿದರು.

ADVERTISEMENT

ದೊಡ್ಡ ಬಸವಣ್ಣ, ದೊಡ್ಡ ಗಣಪತಿ, ಕಾರಂಜಿ ಆಂಜನೇಯನ ದರ್ಶನ ಪಡೆದ ಜನರು ಜಾತ್ರೆಯ ಸೊಬಗನ್ನು ಅನುಭವಿಸಿದರು. ದೊಡ್ಡ ಬಸವಣ್ಣನಿಗೆ ಸೋಮವಾರ ಮುಂಜಾನೆಯಿಂದಲೇ ವಿಶೇಷ ಪೂಜೆ, ಅಲಂಕಾರಗಳು ನಡೆದಿದ್ದವು. 500 ಕೆ.ಜಿ. ಕಡಲೆಕಾಯಿಯಿಂದ ಅಭಿಷೇಕವನ್ನೂ ಮಾಡಲಾಯಿತು. 

ಬಸವನಗುಡಿ ಮುಖ್ಯರಸ್ತೆ ಬೆಳಿಗ್ಗೆಯಿಂದಲೂ ಜನಜಾತ್ರೆಯಂತಿತ್ತು. ಭಕ್ತರು ಸಾಲುಗಟ್ಟಿ ಪೂಜೆ ಸಲ್ಲಿಸಲು ನಿಂತಿದ್ದರು. ರಸ್ತೆಯ ಮಧ್ಯಭಾಗದಲ್ಲಿ ಭಕ್ತರು ಸಾಗಲೆಂದೇ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. 

ಒಣ ಕಡಲೆಕಾಯಿ, ಹಸಿ ಕಡಲೆಕಾಯಿ, ಸುಟ್ಟ– ಬೇಯಿಸಿದ ಕಡಲೆಕಾಯಿ... ಹೀಗೆ ನಾನಾ ರೀತಿಯಲ್ಲಿ ಎರಡು, ಮೂರು, ನಾಲ್ಕೂ ಬೀಜಗಳುಳ್ಳ ತರಹೇವಾರಿ ಕಡಲೆಕಾಯಿಗಳು ನಾಗರಿಕರ ಗಮನಸೆಳೆದವು. ಅಭಿರುಚಿಗೆ ತಕ್ಕಂತೆ ಕಡಲೆಕಾಯಿಗಳನ್ನು ನಾಗರಿಕರು ಖರೀದಿಸಿದರು ಹಾಗೂ ಕೆಲವರು ಅಲ್ಲೇ ಸವಿದರು. ಸೋಮವಾರ ಸಂಜೆ ದೀಪಾಲಂಕಾರದ ಮಧ್ಯೆಯೇ ಜಾತ್ರೆಯ ಸಂಭ್ರಮದಲ್ಲಿ ನಾಗರಿಕರು ಮಿಂದೆದ್ದರು.

‘ಬಡವರ ಬಾದಾಮಿ’ ಎಂಬ ಖ್ಯಾತಿಯ ಕಡಲೆಕಾಯಿ ಬೆಲೆ ಕೆ.ಜಿಗೆ ₹40ರಿಂದ ಆರಂಭವಾಗಿ ₹100ರ ವರೆಗೂ ಇತ್ತು. ಕೆ.ಜಿ ಬದಲಿಗೆ ಲೀಟರ್‌ ಲೆಕ್ಕದಲ್ಲೂ ಕಡಲೆಕಾಯಿ ಲಭ್ಯವಿತ್ತು.

‘ಕನಕಪುರ, ದೊಡ್ಡಬಳ್ಳಾಪುರ, ರಾಮನಗರ, ಮಾಗಡಿ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಮಂಡ್ಯ, ತುಮಕೂರು ಕಡೆಗಳಿಂದ ಕಡಲೆಕಾಯಿಯನ್ನು ತರುತ್ತೇವೆ. ತಮಿಳುನಾಡಿನಿಂದಲೂ ಕೆಲವರು ತರುತ್ತಾರೆ’ ಎಂದು ವ್ಯಾಪಾರಿ ರಾಮವ್ವ ಹೇಳಿದರು.

‘ರಸ್ತೆ ಬದಿ ವ್ಯಾಪಾರಿಗಳಿಗೆ ಈ ಬಾರಿ ಸುಂಕ ಪಾವತಿಸುವ ಅಥವಾ ಟೆಂಡರ್ ಪಡೆಯುವ ಅಗತ್ಯವಿರಲಿಲ್ಲ. ಸಾವಿರಾರು ವ್ಯಾಪಾರಿಗಳಿದ್ದಾರೆ. ಇಲ್ಲಿ ಬಿಲ್‌ ವ್ಯವಸ್ಥೆ ಇರುವುದಿಲ್ಲ. ಇಷ್ಟೇ ವ್ಯಾಪಾರ ನಡೆದಿದೆ ಎಂದು ಹೇಳುವುದು ಕಷ್ಟ. ಹತ್ತಾರು ಕೋಟಿ ವಹಿವಾಟು ನಡೆದಿದೆ’ ಎಂದು ವ್ಯಾಪಾರಿ ರಾಮಕೃಷ್ಣ ತಿಳಿಸಿದರು.

ಪ್ಲಾಸ್ಟಿಕ್‌ ಮುಕ್ತ: ಕಡಲೆಕಾಯಿ ಪರಿಷೆಯಲ್ಲಿ ಪ್ಲಾಸ್ಟಿಕ್‌ ಬಳಕೆ ನಿರ್ಬಂಧಿಸಿದ್ದರಿಂದ, ಬೇಡ ಬೇಡ ಪ್ಲಾಸ್ಟಿಕ್‌ ಚೀಲ... ಪ್ಲಾಸ್ಟಿಕ್‌ ಏಕೆ, ಬಟ್ಟೆ ಚೀಲ ಓಕೆ... ಹೀಗೆಂದು ವ್ಯಾಪಾರಿಗಳು ಫಲಕ ಹಾಕಿಕೊಂಡು, ಕಾಗದ ಅಥವಾ ಬಟ್ಟೆ ಚೀಲಗಳಲ್ಲಿ ಕಡಲೆಕಾಯಿ ನೀಡುತ್ತಿದ್ದರು.

ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ

ಕಡಲೆಕಾಯಿ ಪರಿಷೆ ಅಂಗವಾಗಿ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಿತು. 2008ರಲ್ಲಿ ನಿಂತುಹೋಗಿದ್ದ ತೆಪ್ಪೋತ್ಸವ 2022ರಿಂದ ಆರಂಭಗೊಂಡಿತ್ತು. ಕೆಂಪಾಂಬುಧಿ ಕೆರೆಯಲ್ಲಿ ಸೋಮವಾರ ಸಂಜೆ ವೈಭವದ ನಂದಿ ವಿಗ್ರಹವನ್ನು ಹೊತ್ತ ಹಲವು ಬಗೆಯ ಹೂವು ಮತ್ತು ಬಣ್ಣಬಣ್ಣದ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡ ತೆಪ್ಪ ಸಂಚರಿಸಿತು. ತೆಪ್ಪೋತ್ಸವ ಸಂಚರಿಸುವ ಸಂದರ್ಭದಲ್ಲಿ ಪೂಜಾ ವಿಧಿ–ವಿಧಾನಗಳನ್ನು ಅರ್ಚಕರು ನೆರವೇರಿಸಿದರು.

ವೃಷಭಾವತಿ ನದಿ ಉಗಮ ಸ್ಥಾನಕ್ಕೆ ಮರುಜೀವ: ಡಿಸಿಎಂ

ಬೆಂಗಳೂರು: ‘ಬ್ರ್ಯಾಂಡ್‌ ಬೆಂಗಳೂರು ಅಡಿಯಲ್ಲಿ ವೃಷಭಾವತಿ ನದಿ ಉಗಮಸ್ಥಾನಕ್ಕೆ ಮರುಜೀವ ನೀಡಲಾಗುತ್ತದೆ. ಧಾರ್ಮಿಕ ಮತ್ತು ಪಾರಂಪರಿಕ ಕಾರಿಡಾರ್‌ ಅಭಿವೃದ್ಧಿಪಡಿಸಲಾಗುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು. ಬಸವನಗುಡಿಯಲ್ಲಿ ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ಸೋಮವಾರ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಕಡಲೆಕಾಯಿ ಪರಿಷೆಯನ್ನು ಅಂತರರಾಷ್ಟೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಎಲ್ಲರೂ ಶ್ರಮಿಸಬೇಕು. ಕಾಂಗ್ರೆಸ್ ಕಡಲೆಕಾಯಿ ಎಂದು ಕರೆಯಲಾಗುತ್ತದೆ. ಯಾರು ಈ ಹೆಸರು ಇಟ್ಟರು ಎಂಬುದು ಮಾಹಿತಿಯಿಲ್ಲ. ಮಹಾತ್ಮ ಗಾಂಧಿ ಅವರು ಹೆಸರಿಟ್ಟಿರಬಹುದು ಎನ್ನುವುದು ನನ್ನ ಅಭಿಪ್ರಾಯ’ ಎಂದರು. ‘ಬೆಂಗಳೂರಿನ ಸುತ್ತಲಿನ ರೈತರು ಇಲ್ಲಿಗೆ ಬಂದು ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ.  ಕೆಂಪೇಗೌಡರು ರೈತರನ್ನು ಉಳಿಸಲು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ’ ಎಂದು ಹೇಳಿದರು. ‘ವಿರೋಧ ಪಕ್ಷದ ನಾಯಕರು ಬ್ರ್ಯಾಂಡ್ ಬೆಂಗಳೂರು ಬಗ್ಗೆ ಟೀಕೆ ಮಾಡಿದ್ದಾರೆ. 2028ಕ್ಕೆ ಮುಂಚಿತವಾಗಿ ನಾನು ಉತ್ತರ ನೀಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.