ADVERTISEMENT

ಕಾಡುಗೊಲ್ಲರನ್ನು ಎಸ್‌.ಟಿಗೆ ಸೇರಿಸಲು ಪ್ರಯತ್ನ ಸಚಿವ ಎ.ನಾರಾಯಣಸ್ವಾಮಿ

ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 20:25 IST
Last Updated 6 ಫೆಬ್ರುವರಿ 2022, 20:25 IST
ಸಚಿವ ಎ.ನಾರಾಯಣಸ್ವಾಮಿ ‘ನಾವು ಕಾಡುಗೊಲ್ಲರು’ ಸಾಕ್ಷ್ಯಚಿತ್ರದ ಸಿ.ಡಿ. ಬಿಡುಗಡೆ ಮಾಡಿದರು. ನಿರ್ದೇಶಕ ಎ.ಆರ್.ನಂಜುಂಡೇಗೌಡ, ಕಾಡುಗೊಲ್ಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ, ನಿರ್ಮಾಪಕ ದೊಡ್ಡನಾಗಯ್ಯ ಇದ್ದಾರೆ– ಪ್ರಜಾವಾಣಿ ಚಿತ್ರ
ಸಚಿವ ಎ.ನಾರಾಯಣಸ್ವಾಮಿ ‘ನಾವು ಕಾಡುಗೊಲ್ಲರು’ ಸಾಕ್ಷ್ಯಚಿತ್ರದ ಸಿ.ಡಿ. ಬಿಡುಗಡೆ ಮಾಡಿದರು. ನಿರ್ದೇಶಕ ಎ.ಆರ್.ನಂಜುಂಡೇಗೌಡ, ಕಾಡುಗೊಲ್ಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ, ನಿರ್ಮಾಪಕ ದೊಡ್ಡನಾಗಯ್ಯ ಇದ್ದಾರೆ– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಮೀಸಲಾತಿ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುತ್ತೇನೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜೊತೆಗೂ ಚರ್ಚಿಸುತ್ತೇನೆ’ ಎಂದುಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ‘ನಾವು ಕಾಡುಗೊಲ್ಲರು’ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿ ಭಾನುವಾರ ಮಾತನಾಡಿದರು.

‘ಕಾಡುಗೊಲ್ಲರ ಸಂಸ್ಕೃತಿಯಲ್ಲಿ ಸಿರಿತನವಿದೆ. ಈ ಸಮುದಾಯದವರು ಮನುಕುಲಕ್ಕೆ ಮಾದರಿಯಾಗಿ ಬಾಳುತ್ತಿದ್ದಾರೆ‌. ಸ್ವಾತಂತ್ರ್ಯ ನಂತರದ ಎಲ್ಲಾ ಸರ್ಕಾರಗಳೂ ಇವರನ್ನು ಕಡೆಗಣಿಸಿವೆ. ಮೈಸೂರು ವಿಶ್ವವಿದ್ಯಾಲಯವು ಕಾಡುಗೊಲ್ಲರ ಇತಿಹಾಸವನ್ನು ಕಲೆಹಾಕುವ ಕೆಲಸ ಮಾಡಿದೆ. ಈ ಕುರಿತಾದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇನೆ’ ಎಂದರು.

ADVERTISEMENT

‘ಕಾಡುಗೊಲ್ಲರು ನೆಲೆಸಿರುವ ಪ್ರದೇಶವನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಅವರಿಗೆ ಹಕ್ಕುಪತ್ರ ನೀಡಬೇಕು. ಈ ಸಮುದಾಯದವರಿಗಾಗಿ 15 ಎಕರೆ ಭೂಮಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಹೇಳಿದರು.

ಕಾಡುಗೊಲ್ಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ ಅವರು ಮಾತನಾಡಿ, ‘ನಮ್ಮ ಜನಾಂಗ ಆರ್ಥಿಕವಾಗಿ ಹಿಂದುಳಿದಿದೆ. ಸಮುದಾಯವನ್ನು ಎಸ್‌.ಟಿ.ಗೆ ಸೇರಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದೇವೆ. ಅಗತ್ಯ ಮೌಲಸೌಕರ್ಯ ಕಲ್ಪಿಸುವ ಜೊತೆಗೆ ಕಾಡಂಚಿನ ಹಟ್ಟಿಗಳಲ್ಲಿ ವಾಸಿಸುತ್ತಿರುವಸಮುದಾಯದ ಜನರಿಗೆ ಹಕ್ಕು ಪತ್ರ ನೀಡುವಂತೆಯೂ ಕೋರಲಾಗಿದೆ’ ಎಂದು ತಿಳಿಸಿದರು.

‘ಸಮುದಾಯದ ಜನ ಶಿಕ್ಷಣ, ವಸತಿ, ಉದ್ಯೋಗವಕಾಶಗಳಿಂದ ವಂಚಿತರಾಗಿದ್ದಾರೆ. ಜನರ ಜೀವನದ ವಾಸ್ತವತೆಯನ್ನು ತೋರಿಸುವ ಸಲುವಾಗಿಯೇ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ. ಚಿತ್ರದುರ್ಗ, ತುಮಕೂರು, ಪಾವಗಡ, ಶಿರಾ, ಕೂಡ್ಲಿಗಿ, ಕೊರಟಗೆರೆಯಲ್ಲಿ ಹೆಚ್ಚಾಗಿ ವಾಸಿಸುವ ಸಮುದಾಯದ ಜನರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಪ್ರಯತ್ನಿಸಬೇಕು’ ಎಂದು ತಿಳಿಸಿದರು. ಮುಖಂಡರಾದ ಉಮಾಪತಿ, ಮಹಲಿಂಗಪ್ಪ, ದೇವರಾಜು, ಬಸವರಾಜ್‌, ತಿಮ್ಮಯ್ಯ, ಗುರುಲಿಂಗಯ್ಯ, ಸಿದ್ದೇಶ್‌, ಮುರಳಿ, ದೊಡ್ಡಪ್ಪ, ವಿಶ್ವನಾಥ, ರಂಗಸ್ವಾಮಿ, ಪೂಜಾರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.