ADVERTISEMENT

ಜೀವನದಲ್ಲಿ ತೃಪ್ತಿ ಕಂಡುಕೊಳ್ಳುವಿಕೆ ಕಷ್ಟ: ನಟ ‌ರಮೇಶ್ ಅರವಿಂದ್

‘ಪ್ರೀತಿಯಿಂದ ರಮೇಶ್ – ಯಶಸ್ಸಿನ ಸರಳ ಸೂತ್ರಗಳು’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 19:14 IST
Last Updated 11 ಸೆಪ್ಟೆಂಬರ್ 2022, 19:14 IST
ಅನಂತ್ ನಾಗ್ ಅವರು (ಮಧ್ಯದವರು) ರಮೇಶ್ ಅರವಿಂದ್ ಅವರ (ಎಡದಿಂದ ಎರಡನೇಯವರು) ‘ಪ್ರೀತಿಯಿಂದ ರಮೇಶ್–ಯಶಸ್ಸಿನ ಸರಳ ಸೂತ್ರಗಳು’ ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್, ಪತ್ರಕರ್ತ ಜೋಗಿ ಹಾಗೂ ಜಮೀಲ್ ಸಾವಣ್ಣ ಇದ್ದಾರೆ– ಪ್ರಜಾವಾಣಿ ಚಿತ್ರ
ಅನಂತ್ ನಾಗ್ ಅವರು (ಮಧ್ಯದವರು) ರಮೇಶ್ ಅರವಿಂದ್ ಅವರ (ಎಡದಿಂದ ಎರಡನೇಯವರು) ‘ಪ್ರೀತಿಯಿಂದ ರಮೇಶ್–ಯಶಸ್ಸಿನ ಸರಳ ಸೂತ್ರಗಳು’ ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್, ಪತ್ರಕರ್ತ ಜೋಗಿ ಹಾಗೂ ಜಮೀಲ್ ಸಾವಣ್ಣ ಇದ್ದಾರೆ– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜೀವನದಲ್ಲಿ ತೃಪ್ತಿ ಕಂಡುಕೊಳ್ಳುವುದು ಕಷ್ಟ. ಆಸೆಗಳನ್ನು ಈಡೇರಿಸಿಕೊಂಡಷ್ಟು ಹೊಸ ಆಸೆಗಳು ಉದ್ಭವಿಸುತ್ತವೆ’ ಎಂದು ಚಲನಚಿತ್ರ ನಟ ‌ರಮೇಶ್ ಅರವಿಂದ್ ತಿಳಿಸಿದರು.

ಸಾವಣ್ಣ ಪ್ರಕಾಶನ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರ ‘ಪ್ರೀತಿಯಿಂದ ರಮೇಶ್–ಯಶಸ್ಸಿನ ಸರಳ ಸೂತ್ರಗಳು’ ಪುಸ್ತಕ ಬಿಡುಗಡೆಯಾಯಿತು. ‘ಜೀವನದ ವಿವಿಧ ಹಂತಗಳಲ್ಲಿ ಮನುಷ್ಯನ ಆಸೆಗಳು ಮತ್ತು ಆದ್ಯತೆಗಳು ಬದಲಾಗುತ್ತಾ ಹೋಗುತ್ತವೆ. ಕೊನೆಗೆ ನೆಮ್ಮದಿಯೇ ಸಾಕು ಅನ್ನಿಸಿಬಿಡುತ್ತದೆ. ನನ್ನ ಬದುಕೂ ಇದಕ್ಕೆ ಹೊರತಾಗಿಲ್ಲ. ಆದರೆ, ಯಾವುದೇ ಅಚ್ಚರಿಯ ವಿಷಯಗಳು ನಮ್ಮ ಅರಿವಿಗೆ ಬಂದಾಗ, ಥಟ್ ಅಂತ ನಮ್ಮವರಿಗೆ ಹೇಳುವುದು ಎಲ್ಲರ ಸ್ವಭಾವ. ಅಂತಹ ಆಸಕ್ತಿಕರ ವಿಷಯಗಳನ್ನು ನಾನೂ ಈ ಕೃತಿಯ ಮೂಲಕ ಹೇಳುತ್ತಿದ್ದೇನೆ’ ಎಂದು ರಮೇಶ್ ಹೇಳಿದರು.

‘ನಾನು ಚಿಕ್ಕ ವಯಸ್ಸಿನಿಂದ ಈವರೆಗೆ ಓದಿದ, ಕೇಳಿದ ಹಾಗೂ ನೋಡಿದ ಕೆಲವು ಸಣ್ಣ-ಪುಟ್ಟ ಘಟನೆಗಳನ್ನು ಈ ಪುಸ್ತಕದಲ್ಲಿ ಬರೆದಿದ್ದೇನೆ. ಒಬ್ಬರಿಗೆ ಒಳ್ಳೆಯದು ಅನ್ನಿಸಿದ್ದು, ಬೇರೆಯವರಿಗೆ ಹೇಳಿಕೊಳ್ಳುವವರೆಗೆ ನಮಗೆ ಸಮಾಧಾನ ಇರುವುದಿಲ್ಲ. ಹೀಗಾಗಿ, ನಾನು ಕೆಲವು ಒಳ್ಳೆಯ ವಿಷಯಗಳನ್ನು ಪುಸ್ತಕದಲ್ಲಿ ಹಂಚಿಕೊಂಡಿದ್ದೇನೆ’ ಎಂದು ತಿಳಿಸಿದರು.

ADVERTISEMENT

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಚಲನಚಿತ್ರ ನಟ ಅನಂತ್ ನಾಗ್, ‘ಮನುಷ್ಯ ಜೀವನದಲ್ಲಿ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಪುಸ್ತಕ ಓದಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಈ ಪುಸ್ತಕ ಕೈಪಿಡಿ ಆಗಬೇಕು. ರಮೇಶ್ ಒಬ್ಬ ಸಾಧಕ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.ನಾವಿಬ್ಬರು ಒಟ್ಟಾಗಿ ಸಿನಿಮಾ ಮಾಡುವಾಗ ಸೆಟ್‌ನಲ್ಲಿ ಕೆಲವು ಸಣ್ಣ ಪುಟ್ಟ ಲೋಪದೋಷಗಳು ಸಂಭವಿಸಿದರೆ, ಆ ಬಗ್ಗೆ ಅವರು ಸಿಟ್ಟಾಗುತ್ತಿರಲಿಲ್ಲ’ ಎಂದು ಹಳೆಯ ದಿನಗಳನ್ನು ಸ್ಮರಿಸಿಕೊಂಡರು.

‘ನೈತಿಕತೆ ಮೌಲ್ಯಗಳ ಮಾರ್ಗದರ್ಶನ ನೀಡುವ ಕೈಪಿಡಿಯನ್ನು ರಮೇಶ್ ಅರವಿಂದ್ ತಮ್ಮ ಕೃತಿಯ ಮೂಲಕ ನೀಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾವಣ್ಣ ಪ್ರಕಾಶನದ ಪ್ರಕಾಶಕ ಜಮೀಲ್, ‘ಪುಸ್ತಕದ ಎಲ್ಲ ಪತ್ರಿಗಳು ಮಾರಾಟವಾಗಿದ್ದು, ಶೀಘ್ರದಲ್ಲೇ ಎರಡನೇ ಮುದ್ರಣ ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.