ADVERTISEMENT

ಕನ್ನಡ ಪುಸ್ತಕೋದ್ಯಮಕ್ಕೆ ಚೈತನ್ಯ ತುಂಬಿ: ಮಧು ಬಂಗಾರಪ್ಪಗೆ ಎಚ್.ವಿಶ್ವನಾಥ್ ಮನವಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 15:18 IST
Last Updated 12 ಸೆಪ್ಟೆಂಬರ್ 2025, 15:18 IST
<div class="paragraphs"><p>ಎ.ಎಚ್‌.ವಿಶ್ವನಾಥ್‌</p></div>

ಎ.ಎಚ್‌.ವಿಶ್ವನಾಥ್‌

   

ಬೆಂಗಳೂರು: ‘ಕನ್ನಡ ಪುಸ್ತಕಗಳಿಗೆ ಪುಟವಾರು ಬೆಲೆ ಪರಿಷ್ಕರಣೆ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಏಕಗವಾಕ್ಷಿ ಯೋಜನೆಯಡಿ ಪುಸ್ತಕಗಳ ಖರೀದಿ ಸೇರಿ ವಿವಿಧ ಕ್ರಮಗಳ ಮೂಲಕ ಪುಸ್ತಕೋದ್ಯಮಕ್ಕೆ ಚೈತನ್ಯ ತುಂಬಬೇಕು’ ಎಂದು ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

ಈ ಬಗ್ಗೆ ಅವರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ‘ಪ್ರತಿ ವರ್ಷ ಎಲ್ಲ ಬೆಲೆಗಳೂ ಪರಿಷ್ಕರಣೆ ಆಗುವುದು ಸಹಜ. ಆದರೆ, ಕಳೆದ ಏಳು ವರ್ಷಗಳಿಂದ ಸರ್ಕಾರವು ಕನ್ನಡ ಪುಸ್ತಕಗಳ ಪುಟವಾರು ಬೆಲೆ ಪರಿಷ್ಕರಣೆ ಮಾಡಿಲ್ಲ. ಸಾಹಿತಿಗಳು ಮತ್ತು ಪ್ರಕಾಶಕರು ಹಲವು ಬಾರಿ ಗ್ರಂಥಾಲಯ ಇಲಾಖೆ ನಿರ್ದೇಶಕರು, ಕಾರ್ಯದರ್ಶಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಮುದ್ರಣ ಬೆಲೆಗಳು ಹೆಚ್ಚಿದ್ದರೂ ಸರ್ಕಾರವು ನಿಗದಿಪಡಿಸಿದ ಬೆಲೆಯಲ್ಲಿಯೇ ಪುಸ್ತಕಗಳನ್ನು ಸರಬರಾಜು ಮಾಡುತ್ತಿರುವುದು ಲೇಖಕರ ಮತ್ತು ಪ್ರಕಾಶಕರ ಔದಾರ್ಯ ಹಾಗೂ ಸಮಾಜಸೇವಾ ಮನೋಭಾವವನ್ನು ತೋರಿಸುತ್ತದೆ. ಪ್ರತಿ ಪುಟದ ದರವನ್ನು 50 ಪೈಸೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದ್ದಾರೆ. 

ADVERTISEMENT

‘ಪ್ರತಿ ವರ್ಷ ಫೆಬ್ರುವರಿ ತಿಂಗಳಿನಲ್ಲಿಯೇ ಇಲಾಖೆಯ ಬಜೆಟ್ ಅನುಮೋದನೆಗೊಂಡು, ಆರ್ಥಿಕ ವರ್ಷದ ಮೊದಲ ದಿನದಿಂದಲೇ ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ನಡೆಸಲು ಅನುವು ಮಾಡಿಕೊಡಬೇಕು. ಆದರೆ, ಇಲಾಖೆಯಲ್ಲಿ ಹಲವು ವರ್ಷಗಳಿಂದ ಬಜೆಟ್ ಅನುಮೋದನೆಗೊಳ್ಳುವುದು ಮಾರ್ಚ್ ತಿಂಗಳಲ್ಲಿ. ಎಷ್ಟೋ ಜಿಲ್ಲಾ ಕೆಂದ್ರ ಗ್ರಂಥಾಲಯಗಳ ಬಜೆಟ್ ಅನುಮೋದನೆಯು ಅರ್ಥಿಕ ವರ್ಷದ ಕೊನೆಯ ಎರಡು ಮೂರು ದಿನಗಳಲ್ಲಿ ಆಗುತ್ತದೆ. ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಗ್ರಂಥಾಲಯ ಇಲಾಖೆಯ ಏಕಗವಾಕ್ಷಿ ಯೋಜನೆಯಡಿ ಕಳೆದ ಎರಡು ವರ್ಷಗಳಿಂದ ಪುಸ್ತಕ ಖರೀದಿ ನಡೆದಿಲ್ಲ. ಅಧಿಕಾರಿಗಳ ಕರ್ತವ್ಯ ಲೋಪದಿಂದ ಈ ಯೋಜನೆಗಳಿಗೆ ಸರ್ಕಾರದಿಂದ ಮಂಜೂರಾಗಿದ್ದ, ಕ್ರಿಯಾ ಯೋಜನೆಯಲ್ಲಿ ನಿಗದಿಯಾಗಿದ್ದ ಹಣ ಇಲಾಖೆಗೆ ಬಾರದೆ ಯೋಜನೆಗಳು ಸಮರ್ಪಕವಾಗಿ ನಡೆದಿಲ್ಲ. ಈ ಬಗ್ಗೆಯೂ ಕ್ರಮವಹಿಸಿ, ಯೋಜನೆಯಡಿ ಪುಸ್ತಕಗಳ ಖರೀದಿ ನಡೆಯಬೇಕು. ಗ್ರಾಮೀಣಾಭಿವೃದ್ಧಿ ಮತು ಪಂಚಾಯತ್ ರಾಜ್ ಇಲಾಖೆಯಡಿ ಇರುವ ಗ್ರಾಮೀಣ ಗ್ರಂಥಾಲಯಗಳನ್ನು ಮತ್ತೆ ಗ್ರಂಥಾಲಯ ಇಲಾಖೆಯ ವ್ಯಾಪ್ತಿಗೆ ತರಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.