ADVERTISEMENT

ವಿಭಜಕ ರಾಜಕಾರಣಕ್ಕೆ ಭಾಷೆಯೇ ಸೌಹಾರ್ದ ಔಷಧ: ಪುರುಷೋತ್ತಮ ಬಿಳಿಮಲೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 16:19 IST
Last Updated 5 ಆಗಸ್ಟ್ 2025, 16:19 IST
ಪುರುಷೋತ್ತಮ ಬಿಳಿಮಲೆ 
ಪುರುಷೋತ್ತಮ ಬಿಳಿಮಲೆ    

ಬೆಂಗಳೂರು: ‘ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಸಮುದಾಯಗಳ ನಡುವಿನ ಸಾಮರಸ್ಯ ಕದಡುವ ವಿಭಜಕ ರಾಜಕಾರಣಕ್ಕೆ ಭಾಷೆಯೇ ಸೌಹಾರ್ದ ಔಷಧ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು. 

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜಂಟಿಯಾಗಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಅರೇಬಿಕ್ ಮದರಸಾಗಳ ಶಿಕ್ಷಕರಿಗೆ ಕನ್ನಡ ಕಲಿಸುವ ಅಭಿಯಾನ’ದಲ್ಲಿ ಭಾಗವಹಿಸಿ, ಮಾತನಾಡಿದರು. 

‘ಭಾಷೆಯ ಮೂಲಕ ಯಾವುದೇ ಸಮುದಾಯ ಅವಮಾನಕ್ಕೆ ಒಳಗಾಗಬಾರದು. ರಾಜ್ಯ ಭಾಷೆಯನ್ನು ಕಲಿತ ಸಮುದಾಯ, ತಾನು ವಾಸಿಸುವ ನಾಡಿನಲ್ಲಿ ಸಾಮರಸ್ಯದಿಂದ ಜೀವಿಸಲು ತನ್ನದೇ ಆದ ಚೈತನ್ಯ ಪಡೆಯುತ್ತದೆ. ಹಾಗಾಗಿ, ಅಲ್ಪಸಂಖ್ಯಾತರು ಕನ್ನಡ ಕಲಿಯುವುದು ಮುಖ್ಯವಾಗುತ್ತದೆ. ಭಾಷಾ ಸಾಮರಸ್ಯದ ಜೊತೆಗೆ ಸಾಂಸ್ಕೃತಿಕ ಸಾಮರಸ್ಯ ಏರ್ಪಡುವುದೂ ಮುಖ್ಯ. ಪ್ರಾಧಿಕಾರವು ವಿದ್ಯಾರ್ಥಿ ಸಮೂಹದ ಉಪಯೋಗಕ್ಕಾಗಿ ‘ಕನ್ನಡ ಭಾಷಾ ಸಾಮರಸ್ಯದ ನೆಲೆಗಳು’ ಶೀರ್ಷಿಕೆಯಡಿ ನೂರು ಪುಸ್ತಕಗಳನ್ನು ಹೊರತರುವ ಕೆಲಸ ಮಾಡುತ್ತಿದೆ. ಶೀಘ್ರದಲ್ಲಿ ಈ ಪುಸ್ತಕಗಳು ಬಿಡುಗಡೆಯಾಗಲಿವೆ’ ಎಂದು ಹೇಳಿದರು. 

ADVERTISEMENT

‘ಅಲ್ಪಸಂಖ್ಯಾತ ಸಮುದಾಯ ಕನ್ನಡವನ್ನು ನಿರೀಕ್ಷಿತ ಮಟ್ಟದಲ್ಲಿ ಕಲಿಯದೆ ಇರುವುದಕ್ಕೂ ವಿಭಜಕ ರಾಜಕಾರಣವೇ ಕಾರಣವಾಗಿದ್ದು, ಸಾಮರಸ್ಯದ ದೃಷ್ಟಿಯಿಂದ ಎಲ್ಲವನ್ನೂ ಮರೆತು ರಾಜ್ಯಭಾಷೆಯನ್ನು ಕಲಿಯಲು ಮುಂದಾಗಬೇಕು. ಮುಂದಿನ ದಿನಗಳಲ್ಲಿ ಕ್ರೈಸ್ತ ಸಮುದಾಯ ಸೇರಿದಂತೆ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳಿಗೆ ಕನ್ನಡ ಕಲಿಸುವ ಪ್ರಯತ್ನವನ್ನು ಪ್ರಾಧಿಕಾರ ನಡೆಸಲಿದೆ’ ಎಂದರು.

‘ಉರ್ದು ಅಕಾಡೆಮಿಗೆ ಲಭ್ಯವಿರುವ ಸ್ವಾಯತ್ತತೆಯನ್ನು ಗೌಣವಾಗಿಸದೆ, ಅದನ್ನು ಮುಖ್ಯವಾಹಿನಿಯಲ್ಲಿ ಉಳಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ತರಬೇಕು’ ಎಂದು ಬಿಳಿಮಲೆ ಅವರು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಅವರಿಗೆ ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ಸಚಿವರು, ‘ಈ ಕುರಿತಂತೆ ಖಂಡಿತವಾಗಿಯೂ ಕ್ರಮ ವಹಿಸುತ್ತೇನೆ’ ಎಂದು ಭರವಸೆ ನೀಡಿದರು.

ಕನ್ನಡ ಕಲಿಕೆ: ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್, ‘ರಾಜ್ಯದಲ್ಲಿರುವ ಎಲ್ಲ ಎರಡು ಸಾವಿರ ಮದರಸಾಗಳಲ್ಲಿ ಕನ್ನಡ ಕಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕ್ರಮವಹಿಸಲಿದೆ. ಇದಕ್ಕೆ ಅಲ್ಪಸಂಖ್ಯಾತರ ಆಯೋಗವು ಸಹಕಾರ ನೀಡಲಿದೆ. ಪಠ್ಯಕ್ರಮವನ್ನು ಆಯೋಗವು ಪ್ರಾಧಿಕಾರದ ಸಲಹೆಯಂತೆ ರೂಪಿಸಲಿದೆ’ ಎಂದು ಹೇಳಿದರು. 

ಇದೇ ವೇಳೆ ಮಾತನಾಡಿದ ಸಚಿವ ಜಮೀರ್ ಅಹಮದ್, ‘ಮಸೀದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲ್ವಿಗಳಿಗೂ ಕನ್ನಡ ಬೋಧಿಸಲು ಕ್ರಮ ವಹಿಸಲಾಗುವುದು’ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಹಾಗೂ ಅಲ್ಪಸಂಖ್ಯಾತ ಆಯೋಗದ ಕಾರ್ಯದರ್ಶಿ ಮಾಜುದ್ದೀನ್ ಖಾನ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.