ADVERTISEMENT

ನಲಿ ಕಲಿ ಅನುಷ್ಠಾನದಲ್ಲಿ ವಿಫಲ:ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವರದಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 15:43 IST
Last Updated 10 ಫೆಬ್ರುವರಿ 2026, 15:43 IST
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ನಲಿಕಲಿ ಯೋಜನೆಗೆ ಸಂಬಂಧಿಸಿದ ವರದಿಯನ್ನು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮಂಗಳವಾರ ಸಲ್ಲಿಸಿದರು. ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ರವಿಕುಮಾರ್ ನೀಹ, ಕಾರ್ಯದರ್ಶಿ ಸಂತೋಷ ಹಾನಗಲ್ಲ ಹಾಗೂ ಆಪ್ತ ಕಾರ್ಯದರ್ಶಿ ಟಿ.ಎಸ್. ಫಣಿಕುಮಾರ್ ಉಪಸ್ಥಿತರಿದ್ದರು
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ನಲಿಕಲಿ ಯೋಜನೆಗೆ ಸಂಬಂಧಿಸಿದ ವರದಿಯನ್ನು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮಂಗಳವಾರ ಸಲ್ಲಿಸಿದರು. ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ರವಿಕುಮಾರ್ ನೀಹ, ಕಾರ್ಯದರ್ಶಿ ಸಂತೋಷ ಹಾನಗಲ್ಲ ಹಾಗೂ ಆಪ್ತ ಕಾರ್ಯದರ್ಶಿ ಟಿ.ಎಸ್. ಫಣಿಕುಮಾರ್ ಉಪಸ್ಥಿತರಿದ್ದರು   

ಬೆಂಗಳೂರು: ‘ಶಿಕ್ಷಣ ಇಲಾಖೆಯ ನಲಿಕಲಿ ಯೋಜನೆಯ ಪರಿಕಲ್ಪನೆಯು ಬಹಳ ಚೆನ್ನಾಗಿದ್ದರೂ ಅದನ್ನು ಅನುಷ್ಠಾನ ಮಾಡುವಲ್ಲಿ ಶಿಕ್ಷಕರು ವಿಫಲರಾಗಿದ್ದಾರೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರವಿಕುಮಾರ್‌ ನೀಹ ಅವರು ನಲಿಕಲಿ ಯೋಜನೆ ಸಫಲತೆ ಮತ್ತು ವಿಫಲತೆಗಳ ಸಿದ್ಧಪಡಿಸಿದ ವರದಿಯನ್ನು ‍ಪ್ರಾಧಿಕಾರದ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ, ಅಂತಿಮಗೊಳಿಸಿದ ವರದಿಯನ್ನು ಮಂಗಳವಾರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲ್ಲಿಸಲಾಯಿತು. 

‘ನಲಿಕಲಿ ಯೋಜನೆಯ 80 ನಿಮಿಷಗಳ ಒಂದು ಅವಧಿಯನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುವಲ್ಲಿ ಶಿಕ್ಷಕರು ವಿಫಲರಾಗಿದ್ದಾರೆ. ತರಬೇತಿ ಪಡೆದ ಶಿಕ್ಷಕರು ನಿವೃತ್ತರಾದಾಗ ಅವರ ಜಾಗದಲ್ಲಿ ನೇಮಕಗೊಂಡ ಅತಿಥಿ ಶಿಕ್ಷಕರಿಗೆ ಸೂಕ್ತವಾದ ತರಬೇತಿ ನೀಡಿಲ್ಲ. ಒಂದರಿಂದ ಮೂರನೇ ತರಗತಿಯವರೆಗಿನ ಮಕ್ಕಳ ವಯಸ್ಸು, ಕಲಿಕಾ ಮಟ್ಟ ಮತ್ತು ಕಲಿಕಾ ಸಾಮರ್ಥ್ಯ ಒಂದೇ ರೀತಿ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಬಹು ವರ್ಗ ಬೋಧನೆಯನ್ನು ಅರ್ಥಪೂರ್ಣಗೊಳಿಸಲು ಬೇಕಾದ ಗುಂಪು ರಚನೆ ಹಾಗೂ ನಿರ್ವಹಣೆಯ ವಿಷಯದಲ್ಲಿ ಶಿಕ್ಷಕರು ವಿಫಲರಾಗಿದ್ದಾರೆ. ಇದರಿಂದ ಭಾಷಾ ಕಲಿಕೆಗೆ ತೀವ್ರ ಹಿನ್ನಡೆಯಾಗಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ADVERTISEMENT

‘ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳಿರುವ ತರಗತಿಗಳಲ್ಲಿ ಎಲ್ಲ ಮಕ್ಕಳ ಮೇಲೂ ಸಮಾನವಾಗಿ ಗಮನ ಹರಿಸಲು ಶಿಕ್ಷಕರಿಗೆ ಸಾಧ್ಯವಾಗಿಲ್ಲ. ತರಗತಿಗಳನ್ನು ಅರ್ಥಪೂರ್ಣವಾಗಿ ನಡೆಸಲು ಬೇಕಾದ ಕಲಿಕಾ ಸಾಮಗ್ರಿಗಳು ಹಲವು ಶಾಲೆಗಳಿಗೆ ಪೂರೈಕೆ ಆಗಿಲ್ಲ. ಅನೇಕ ಶಿಕ್ಷಕರಿಗೆ ನಲಿ ಕಲಿ ಯೋಜನೆಯ ಬಗ್ಗೆ ಸ್ಪಷ್ಟ ಕಲ್ಪನೆಯೇ ಇಲ್ಲ. ಕೆಲವರು ನಲಿ ಕಲಿ ಯೋಜನೆಯನ್ನು ಸಂಸ್ಕೃತಿ ಆಧಾರಿತ ಪ್ರಕ್ರಿಯೆಯಾಗಿ ಬೆಳೆಸಲೂ ಇಲ್ಲ. ಮತ್ತೆ ಹಲವರು ಯೋಜನೆಯನ್ನು ಸಾಕಾರಗೊಳಿಸಲು ಬೇಕಾದ ತಯಾರಿ ಮಾಡಿಕೊಂಡಿರಲಿಲ್ಲ’ ಎಂದು ತಿಳಿಸಿದೆ.

‘ಮೂರು ತರಗತಿಗಳಿಗೆ ಒಬ್ಬರು ಶಿಕ್ಷಕರಾ? ಎಂದು ಪೋಷಕರು ಪ್ರಶ್ನಿಸುತ್ತಾರೆ. ಅವರಿಗೆ ನಲಿ ಕಲಿ ಯೋಜನೆಯ ಮಹತ್ವ ತಿಳಿದಿರುವುದಿಲ್ಲ. ಅಂತಹವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಕಡಿಮೆಯಾಗಿದೆ. ವಿದ್ಯಾರ್ಥಿಗಳ ಪ್ರಗತಿಯನ್ನು ನಿರಂತರವಾಗಿ ದಾಖಲಿಸುವುದು ಮತ್ತು ಮೌಲ್ಯಮಾಪನ ಮಾಡುವುದು ಶ್ರಮದಾಯಕವಾದ ಕೆಲಸ. ಅನೇಕ ಕೆಲಸಗಳಲ್ಲಿ ಮಗ್ನರಾದ ಶಿಕ್ಷಕರಿಗೆ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಿಲ್ಲ’ ಎಂದು ವರದಿಯಲ್ಲಿ ಹೇಳಲಾಗಿದೆ. 

‘ನಲಿಕಲಿ ಯೋಜನೆಯನ್ನು ಮುಂದುವರಿಸುವ ಬಗ್ಗೆ ಶಿಕ್ಷಣ ಇಲಾಖೆ ಮರು ಚಿಂತನೆ ನಡೆಸಬೇಕು. ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲು ಈ ವರದಿ ಅನುಕೂಲವಾಗಲಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.