ADVERTISEMENT

ನ್ಯಾಯಾಲಯದಲ್ಲಿ ಕನ್ನಡ ಬಳಕೆಗೆ ನಿರ್ಬಂಧವಿಲ್ಲ: ನ್ಯಾಯಮೂರ್ತಿ ನರೇಂದ್ರ ಪ್ರಸಾದ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 15:28 IST
Last Updated 15 ಆಗಸ್ಟ್ 2025, 15:28 IST
<div class="paragraphs"><p>ನ್ಯಾಯಮೂರ್ತಿ ನರೇಂದ್ರ ಪ್ರಸಾದ್</p></div>

ನ್ಯಾಯಮೂರ್ತಿ ನರೇಂದ್ರ ಪ್ರಸಾದ್

   

ಬೆಂಗಳೂರು: ‘ಸಾಂವಿಧಾನಿಕ ಅವಕಾಶಗಳಂತೆ ನ್ಯಾಯಾಲಯಗಳಲ್ಲಿ ಆಂಗ್ಲ ಭಾಷೆ ಬಳಸಬೇಕೆಂಬ ಸೂಚನೆಗಳಿದ್ದರೂ, ಸ್ಥಳೀಯ ಭಾಷೆಯ ಬಳಕೆಗೆ ಯಾವುದೇ ನಿರ್ಬಂಧವಿಲ್ಲ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಗರದಲ್ಲಿ ಹಮ್ಮಿಕೊಂಡಿದ್ದ ‘ಕನ್ನಡೇತರ ವಕೀಲರಿಗೆ ಕನ್ನಡ ಕಲಿಕಾ ಅಭಿಯಾನ’ ಉದ್ಘಾಟಿಸಿ, ಮಾತನಾಡಿದರು.

ADVERTISEMENT

‘ವಕೀಲರಿಗೆ ಕಕ್ಷಿದಾರ ಮುಖ್ಯನಾಗಬೇಕು. ನ್ಯಾಯಾಲಯದ ಪ್ರಕ್ರಿಯೆ ಅವನಿಗೆ ಅರ್ಥವಾಗುವಂತೆ ನಡೆದಾಗ ಮಾತ್ರ ನ್ಯಾಯದಾನ ಒದಗಲು ಸಾಧ್ಯ. ಹೀಗಾಗಿ, ಎಲ್ಲ ವಕೀಲರು ಕನ್ನಡ ಕಲಿತು, ಕಕ್ಷಿದಾರರೊಂದಿಗೆ ಕನ್ನಡದಲ್ಲಿ ವ್ಯವಹರಿಸಬೇಕು. ನ್ಯಾಯಾಲಯಗಳಲ್ಲಿ ವಾದ ಮಂಡನೆ ವೇಳೆ ಕನ್ನಡ ಬಳಕೆಗೆ ಮುಂದಾಗಬೇಕು’ ಎಂದು ಹೇಳಿದರು. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ‘ರಾಜ್ಯದಲ್ಲಿ ವಾಸಿಸುತ್ತಿರುವ ಕನ್ನಡೇತರರಿಗೆ ಕನ್ನಡ ಕಲಿಸಲು ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಾಧಿಕಾರ ರೂಪಿಸಿದೆ. ರಾಜ್ಯದಾದ್ಯಂತ ಕನ್ನಡ ಕಲಿಕಾ ಕೇಂದ್ರಗಳನ್ನು ವಿಸ್ತರಿಸುವ ಕೆಲಸವನ್ನೂ ನಿರ್ವಹಿಸುತ್ತಿದೆ. ಪ್ರಾಧಿಕಾರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡೇತರ ವಕೀಲರಿಗೆ ಕನ್ನಡ ಕಲಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. 180 ಮದರಸಾಗಳಲ್ಲಿ ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗಿದೆ’ ಎಂದರು.

‘ಸ್ಥಳೀಯರೊಂದಿಗೆ ವ್ಯವಹರಿಸಬೇಕಾದರೆ ಕನ್ನಡೇತರರು ಕನ್ನಡವನ್ನು ಕಲಿಯುವುದು ಮುಖ್ಯ. ಇದರಿಂದ ವಿವಿಧ ರೀತಿಯ ಸಾಂಸ್ಕೃತಿಕ ಸಂಘರ್ಷಗಳನ್ನು ನಿವಾರಿಸಲು ಸಾಧ್ಯ. ಸೌಹಾರ್ದ ಸಮಾಜ ನಿರ್ಮಾಣದಲ್ಲಿ ಭಾಷೆಯ ಪ್ರಾಮುಖ್ಯ ಹಿರಿದು. ಕನ್ನಡೇತರರು ಹೆಮ್ಮೆಯಿಂದ ಕನ್ನಡವನ್ನು ಕಲಿತಾಗ ಮಾತ್ರ ಈ ಆಶಯ ಈಡೇರಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ಬೆಂಗಳೂರು ವಕೀಲರ ಸಾಹಿತ್ಯ ಕೂಟದ ಅಧ್ಯಕ್ಷ ಮಂಜುನಾಥ ಬಿ. ಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.