ADVERTISEMENT

ವಿಮರ್ಶೆಯನ್ನು ಪರೀಕ್ಷೆಗೆ ಒಳಪಡಿಸಬೇಕು: ಶಿವಪ್ರಕಾಶ್ ಅಭಿಮತ

ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಸಂವಾದ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 16:21 IST
Last Updated 6 ಜನವರಿ 2026, 16:21 IST
<div class="paragraphs"><p>ಕಾರ್ಯಕ್ರಮದಲ್ಲಿ ಎಂ.ಎಸ್. ಆಶಾದೇವಿ, ಉದಯನ್‌ ವಾಜಪೇಯಿ ಹಾಗೂ ಎಚ್.ಎಸ್. ಶಿವಪ್ರಕಾಶ್ ಸಮಾಲೋಚನೆ ನಡೆಸಿದರು. ಮೋಹನ್‌ ಕುಮಾರ್ ಕೊಂಡಜ್ಜಿ, ರಾಜೇಂದ್ರ ಚೆನ್ನಿ ಉಪಸ್ಥಿತರಿದ್ದರು </p></div>

ಕಾರ್ಯಕ್ರಮದಲ್ಲಿ ಎಂ.ಎಸ್. ಆಶಾದೇವಿ, ಉದಯನ್‌ ವಾಜಪೇಯಿ ಹಾಗೂ ಎಚ್.ಎಸ್. ಶಿವಪ್ರಕಾಶ್ ಸಮಾಲೋಚನೆ ನಡೆಸಿದರು. ಮೋಹನ್‌ ಕುಮಾರ್ ಕೊಂಡಜ್ಜಿ, ರಾಜೇಂದ್ರ ಚೆನ್ನಿ ಉಪಸ್ಥಿತರಿದ್ದರು

   

ಪ್ರಜಾವಾಣಿ ಚಿತ್ರ  

ಬೆಂಗಳೂರು: ‘ಆಧುನಿಕ ಕನ್ನಡ ಸಾಹಿತ್ಯ ಮತ್ತು ವಿಮರ್ಶೆಯನ್ನು ಪರೀಕ್ಷೆಗೆ ಒಳಪಡಿಸಬೇಕಿದೆ’ ಎಂದು ಕವಿ ಎಚ್.ಎಸ್. ಶಿವಪ್ರಕಾಶ್ ಅಭಿಪ್ರಾಯಪಟ್ಟರು. 

ADVERTISEMENT

ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ವಿಮರ್ಶೆ: ಸಮಕಾಲೀನ ಸಂದರ್ಭ’ ರಾಷ್ಟ್ರೀಯ ಸಂವಾದ ಉದ್ಘಾಟಿಸಿ, ಮಾತನಾಡಿದರು.

‘ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ಒಂದು ರೀತಿಯ ಅನಿರ್ದಿಷ್ಟತೆಯಿದೆ. ನಿರಂತರತೆಯ ಕೊರತೆಯನ್ನು ಈ ಕ್ಷೇತ್ರ ಎದುರಿಸುತ್ತಿದೆ. ಆದ್ದರಿಂದ ಕನ್ನಡ ಸಾಹಿತ್ಯದಲ್ಲಿನ ವಿಮರ್ಶೆಯನ್ನೇ ವಿಮರ್ಶಿಸಬೇಕಿದೆ. ಕನ್ನಡದಲ್ಲಿ ಇರುವ ಅನಿರ್ದಿಷ್ಟತೆ ಇತರ ಭಾಷೆಯ ವಿಮರ್ಶೆಯಲ್ಲಿಯೂ ಇದೆ. ವಿಮರ್ಶಾ ‍ಪರಂಪರೆಯ ಬಗ್ಗೆ ಕನ್ನಡ ಹಾಗೂ ಭಾರತೀಯ ಚೌಕಟ್ಟಿನಲ್ಲಿಯೂ ತಳಸ್ಪರ್ಶಿಯ ಚಿಂತನೆ ನಡೆಯಬೇಕಿದೆ. ಸಾಹಿತ್ಯ ರಚನೆಯ ಹಾಗೂ ಸಮಾಜದ ಸಂದರ್ಭದಲ್ಲಿ ವಿಮರ್ಶೆಯ ಭೂಮಿಕೆಯ ಬಗ್ಗೆ ಚಿಂತನ ಮಂಥನವಾಗಬೇಕು’ ಎಂದು ಹೇಳಿದರು. 

‘ವಿಮರ್ಶೆ ಪಶ್ಚಿಮದಿಂದ ಬಂದ ಸಾಹಿತ್ಯ ಪ್ರಕಾರವಾಗಿದೆ. ಹಿಂದೆ ಕವಿಗಳೇ ವಿಮರ್ಶಕರಾಗಿದ್ದರು. ಕುವೆಂಪು ಮೊದಲಾದವರ ವಿಮರ್ಶೆ ದಿಟ್ಟತನದಿಂದ ಕೂಡಿರುತ್ತಿತ್ತು. ನಂತರ ಸಾಹಿತಿಗಳಲ್ಲದವರು ವಿಮರ್ಶೆಗೆ ತೊಡಗಿದರು. ಕವಿಗಳೇ ಬರೆದ ವಿಮರ್ಶೆಗೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ದೊಡ್ಡ ಸ್ಥಾನವಿದೆ. ವಿಮರ್ಶೆ ಬೆಳೆಯಲು ಅನುವಾದವೂ ಮುಖ್ಯವಾಗುತ್ತದೆ. ಭಾರತೀಯ ಭಾಷೆಗಳಲ್ಲಿ ಅಷ್ಟಾಗಿ ಸಾಹಿತ್ಯದ ವಿನಿಮಯ ನಡೆದಿಲ್ಲ’ ಎಂದರು. 

ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಕುಮಾರ್ ಕೊಂಡಜ್ಜಿ, ‘ಜಯನಗರದಲ್ಲಿ ಪ್ರತಿಷ್ಠಾನಕ್ಕೆ ಸಂಬಂಧಿಸಿದ ನಿವೇಶನವಿದೆ. ಅಲ್ಲಿ ರಂಗಮಂದಿರ, ವಿಚಾರಸಂಕಿರಣ ಕೊಠಡಿ ಹಾಗೂ ಅತಿಥಿ ಕೊಠಡಿಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಇದಕ್ಕೆ ₹ 6 ಕೋಟಿ ಅಗತ್ಯವಿದ್ದು, ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗುವುದು. ರಂಗಶಂಕರದ ರೀತಿ ವರ್ಷದ ಎಲ್ಲ ದಿನಗಳು ನಾಟಕ ಪ್ರದರ್ಶನ ನಡೆಸಲು ರಂಗಮಂದಿರ ಅಗತ್ಯ’ ಎಂದು ಹೇಳಿದರು. 

ಪ್ರತಿಷ್ಠಾನದ ಸದಸ್ಯ ಸಂಚಾಲಕಿಯೂ ಆದ ವಿಮರ್ಶಕಿ ಎಂ.ಎಸ್. ಆಶಾದೇವಿ, ‘ಈ ವರ್ಷ ಜಿ.ಎಸ್.ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವ ಆಚರಿಸಲಾಗುತ್ತಿದೆ. ವರ್ಷಪೂರ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಶಿವರುದ್ರಪ್ಪ ಅವರು ಕನ್ನಡ ಕಟ್ಟುವ ಹಲವು ದಾರಿಯನ್ನು ಹುಡುಕಿ, ಬಲವಾಗಿ ಸ್ಥಾಪಿಸಿದರು. ಅವರು ರಾಷ್ಟ್ರಕವಿ ಬಿರುದಿನ ಹಂಗಿಲ್ಲದೆ ಜನಮಾನಸದ ಕವಿಯಾಗಿದ್ದರು’ ಎಂದರು. 

ಹಿಂದಿ ಲೇಖಕ ಉದಯನ್ ವಾಜಪೇಯಿ, ವಿಮರ್ಶಕ ರಾಜೇಂದ್ರ ಚೆನ್ನಿ, ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಆರ್. ಚಂದ್ರಶೇಖರ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.