ADVERTISEMENT

ಪುಸ್ತಕ ನೀತಿ ಪುನರ್‌ ರಚನೆ: ಅಭಿಪ್ರಾಯ ಆಹ್ವಾನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 20:13 IST
Last Updated 31 ಜನವರಿ 2023, 20:13 IST

ಬೆಂಗಳೂರು: ಕನ್ನಡ ಪುಸ್ತಕ ನೀತಿ ಪುನರ್‌ ರಚನೆಗೆ ಕನ್ನಡ ಪುಸ್ತಕ ಪ್ರಾಧಿಕಾರವು ಸಾರ್ವಜನಿಕರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಿದೆ.

‘ಕನ್ನಡ ಪುಸ್ತಕ ಲೋಕವು ಆಧುನಿಕ ಮಾಧ್ಯಮಗಳ ನೂತನ ಆವಿಷ್ಕಾರಗಳ ಫಲವಾಗಿ ವಿಸ್ತಾರಗೊಳ್ಳುತ್ತಿದೆ. ಹೀಗಾಗಿ, ಪುಸ್ತಕೋದ್ಯಮದ ಎಲ್ಲಾ ಸಾಧ್ಯತೆ ಮತ್ತು ಸವಾಲುಗಳನ್ನು ಹೊಸ ದೃಷ್ಟಿಕೋನದಿಂದ ನೋಡುವ ಅಗತ್ಯ ಇದೆ. ಆದ್ದರಿಂದ ಕನ್ನಡ ಪುಸ್ತಕ ನೀತಿಯನ್ನು ಪುನರ್‌ ರಚಿಸಲು ನಿರ್ಧರಿಸಲಾಗಿದೆ. ಇ-ಪುಸ್ತಕ, ಆಡಿಯೋ ಪುಸ್ತಕ ಒಳಗೊಂಡಂತೆ ಆಧುನಿಕ ಪುಸ್ತಕೋದ್ಯಮದ ಸಾಧಕ-ಬಾಧಕಗಳು ಹಾಗೂ ಕನ್ನಡ ಪುಸ್ತಕ ಲೋಕದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಈ ಪುಸ್ತಕ ನೀತಿ ರಚನೆ ಆಗಬೇಕಿದೆ’ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್‌ ಸಿಂಗ್ ತಿಳಿಸಿದ್ದಾರೆ.

‘ಕನ್ನಡ ಪುಸ್ತಕ ನೀತಿ ಪುನರ್‌ ರಚನೆಗೆ ಪ್ರಾಧಿಕಾರವು ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಿದ್ದು, ಸಮಿತಿಯು ಅಂತಿಮ ಹಂತದ ಕರಡನ್ನು ಸಿದ್ಧಪಡಿಸುತ್ತಿದೆ. ನಾಡಿನ ಬರಹಗಾರರು, ಚಿಂತಕರು, ಓದುಗರು, ಪ್ರಕಾಶಕರು ಹಾಗೂ ಆಸಕ್ತ ಸಾರ್ವಜನಿಕರಿಂದ ಪುಸ್ತಕ ಲೋಕಕ್ಕೆ ಸಂಬಂಧಿಸಿದಂತೆ ಅನುಷ್ಠಾನ ಮಾಡಬಹುದಾದ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳನ್ನು ಪಡೆಯಲು ಈ ಸಮಿತಿಯು ನಿರ್ಧರಿಸಿದೆ’ ಎಂದು ಹೇಳಿದ್ದಾರೆ.

ADVERTISEMENT

‘ ಪುಸ್ತಕ ನೀತಿಯಲ್ಲಿ ಅಳವಡಿಸಬೇಕಾದ ಅಂಶಗಳ ಬಗ್ಗೆ ತಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳನ್ನು ಫೆ.10ರೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, 1ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಈ ವಿಳಾಸಕ್ಕೆ ಕಳುಹಿಸಬಹುದು. ಪ್ರಾಧಿಕಾರದ ಇ-ಮೇಲ್‌ ವಿಳಾಸ kannadappradhikara@gmail.com ಮೂಲಕವೂ ಕಳುಹಿಸಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.