ADVERTISEMENT

ಡಿ.ಆರ್.ಪಾಟೀಲಗೆ ‘ಕಸಾಪ ದತ್ತಿ ಪ್ರಶಸ್ತಿ’ ಪ್ರದಾನ

ಪಂಚಾಯತ್ ರಾಜ್ ವ್ಯವಸ್ಥೆ ಅನುಷ್ಠಾನಕ್ಕೆ ನೀಡಿದ ಕೊಡುಗೆ ಬಗ್ಗೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 14:07 IST
Last Updated 3 ಮಾರ್ಚ್ 2024, 14:07 IST
<div class="paragraphs"><p>ಕಾರ್ಯಕ್ರಮದಲ್ಲಿ ಡಿ.ಆರ್.ಪಾಟೀಲ ಅವರಿಗೆ ‘ಲಿಂಗಮ್ಮ ಮತ್ತು ಡಾ.ಚಿಕ್ಕಕೊಮಾರಿಗೌಡ&nbsp;ಹಾರೋಕೊಪ್ಪ ದತ್ತಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಮಾಜಿ ಸಂಸದ ಸಿ. ನಾರಾಯಣಸ್ವಾಮಿ, ಮಹೇಶ ಜೋಶಿ, ಎಚ್.ಕೆ. ಪಾಟೀಲ, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಮಣಿ ಶಂಕರ್ ಅಯ್ಯರ್ ಮತ್ತು ದತ್ತಿ ದಾನಿ ಚಿಕ್ಕಕೊಮಾರಿಗೌಡ ಪಾಲ್ಗೊಂಡಿದ್ದರು </p></div>

ಕಾರ್ಯಕ್ರಮದಲ್ಲಿ ಡಿ.ಆರ್.ಪಾಟೀಲ ಅವರಿಗೆ ‘ಲಿಂಗಮ್ಮ ಮತ್ತು ಡಾ.ಚಿಕ್ಕಕೊಮಾರಿಗೌಡ ಹಾರೋಕೊಪ್ಪ ದತ್ತಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಮಾಜಿ ಸಂಸದ ಸಿ. ನಾರಾಯಣಸ್ವಾಮಿ, ಮಹೇಶ ಜೋಶಿ, ಎಚ್.ಕೆ. ಪಾಟೀಲ, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಮಣಿ ಶಂಕರ್ ಅಯ್ಯರ್ ಮತ್ತು ದತ್ತಿ ದಾನಿ ಚಿಕ್ಕಕೊಮಾರಿಗೌಡ ಪಾಲ್ಗೊಂಡಿದ್ದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಆರ್.ಪಾಟೀಲ ಅವರಿಗೆ 2023ನೇ ಸಾಲಿನ ‘ಲಿಂಗಮ್ಮ ಮತ್ತು ಡಾ.ಚಿಕ್ಕಕೊಮಾರಿಗೌಡ ಹಾರೋಕೊಪ್ಪ ದತ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ADVERTISEMENT

ಈ ಪ್ರಶಸ್ತಿಯು ₹10 ಸಾವಿರ ನಗದು ಒಳಗೊಂಡಿದೆ. ಕರ್ನಾಟಕ ಪಂಚಾಯತ್ ರಾಜ್ ವ್ಯವಸ್ಥೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದ್ದು, ಚಿಕ್ಕಕೊಮಾರಿಗೌಡ ಅವರು ಈ ಪ್ರಶಸ್ತಿಯನ್ನು ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಮಣಿ ಶಂಕರ್ ಅಯ್ಯರ್, ‘ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದ ರಾಜ್ಯಗಳಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ಇದಕ್ಕೆ ಕಾರಣವಾದವರಲ್ಲಿ ಡಿ.ಆರ್.ಪಾಟೀಲ ಪ್ರಮುಖರು. ಈ ಹಿಂದೆ ಕರ್ನಾಟಕದಲ್ಲಿ ನೇಮಕಗೊಂಡಿದ್ದ ‘ರಮೇಶ್ ಕುಮಾರ್ ಸಮಿತಿ’ಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು 38 ಸಲಹೆಗಳನ್ನು ನೀಡಿದ್ದೆ. ಎಲ್ಲವೂ ಅಂಗೀಕಾರವಾಗಲು ಡಿ.ಆರ್.ಪಾಟೀಲರೇ ಕಾರಣ. ಇಂತಹವರ ಸಮರ್ಪಣಾ ಭಾವದಿಂದಲೇ ಮುಂದಿನ ಕಾಲು ಶತಮಾನದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ದೇಶದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ’ ಎಂದು ಹೇಳಿದರು. 

ಕಾನೂನು ಸಚಿವ ಎಚ್.ಕೆ.ಪಾಟೀಲ, ‘ಡಿ.ಆರ್.ಪಾಟೀಲ ಅವರು ಬಸವಣ್ಣನ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗುತ್ತಿದ್ದಾರೆ. ಕಡ್ಡಾಯ ಮತದಾನ ಜಾರಿಯಾದಾಗ ಪ್ರಜಾಪ್ರಭುತ್ವ ನಿಜಕ್ಕೂ ಅರ್ಥಪಡೆದುಕೊಳ್ಳುತ್ತದೆ ಎನ್ನುವುದನ್ನು ಅವರು ಅರಿತಿದ್ದರು. ಹೀಗಾಗಿಯೇ ಅಧಿಕಾರ ವಿಕೇಂದ್ರೀಕರಣಕ್ಕೆ ಪ್ರಯತ್ನಿಸಿದರು’ ಎಂದರು. 

ಕಸಾಪ ಅಧ್ಯಕ್ಷ ಮಹೇಶ ಜೋಶಿ, ‘ಪ್ರಶಸ್ತಿಗೆ ಆದರ್ಶ ಜನಪ್ರತಿನಿಧಿಗಳನ್ನು ಆಯ್ಕೆಮಾಡಬೇಕು ಅಂದುಕೊಂಡಾಗ ನಮ್ಮೆದುರು ದೊಡ್ಡ ಸವಾಲೇ ಬಂದಿತು. ಪ್ರಜಾಪ್ರಭುತ್ವದ ಕುರಿತು ಮುಂದಿನ ಪೀಳಿಗೆಗೆ ನಂಬಿಕೆ ಉಳಿಯುವಂತಹ ಆಯ್ಕೆಯನ್ನು ನಾವು ಮಾಡಬೇಕಿತ್ತು. ಅದಕ್ಕೆ ಡಿ.ಆರ್.ಪಾಟೀಲ ಅವರು ಅತ್ಯಂತ ಸೂಕ್ತರೆನ್ನಿಸಿದರು’ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಿ.ಆರ್.ಪಾಟೀಲ, ‘ಪಂಚಾಯತ್ ರಾಜ್ ವ್ಯವಸ್ಥೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದರೆ ನಾನು ಪ್ರಶಸ್ತಿ ಒಪ್ಪಿಕೊಂಡಿದ್ದಕ್ಕೂ ಸಾರ್ಥಕವಾಗುತ್ತದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.