ADVERTISEMENT

ಅನಕೃ ಹಾಕಿಕೊಟ್ಟ ಹಾದಿಯಲ್ಲಿ ಪರಿಷತ್ತು: ಮಹೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 9 ಮೇ 2023, 21:17 IST
Last Updated 9 ಮೇ 2023, 21:17 IST
ಅನೃಕೃ ಅವರ ಭಾವಚಿತ್ರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಿ.ಎಮ್‌. ಪಟೇಲ್‌ಪಾಂಡು, ಮಹೇಶ ಜೋಶಿ, ಗೌರವ ಕಾರ್ಯದರ್ಶಿಗಳಾದ ಪದ್ಮಿನಿ ನಾಗರಾಜು ಹಾಗೂ ನೇ.ಭ. ರಾಮಲಿಂಗ ಶೆಟ್ಟಿ ಅವರು ಪುಷ್ಪ ನಮನ ಸಲ್ಲಿಸಿದರು. 
ಅನೃಕೃ ಅವರ ಭಾವಚಿತ್ರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಿ.ಎಮ್‌. ಪಟೇಲ್‌ಪಾಂಡು, ಮಹೇಶ ಜೋಶಿ, ಗೌರವ ಕಾರ್ಯದರ್ಶಿಗಳಾದ ಪದ್ಮಿನಿ ನಾಗರಾಜು ಹಾಗೂ ನೇ.ಭ. ರಾಮಲಿಂಗ ಶೆಟ್ಟಿ ಅವರು ಪುಷ್ಪ ನಮನ ಸಲ್ಲಿಸಿದರು.    

ಬೆಂಗಳೂರು: ‘ಮಣಿಪಾಲದಲ್ಲಿ ನಡೆದ 42ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿದ್ದ ಅನಕೃ (ಅ.ನ.ಕೃಷ್ಣರಾಯ), ತಮ್ಮ ಭಾಷಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಹೇಗಿರಬೇಕು ಎನ್ನುವ ಮಾರ್ಗಸೂಚಿಯನ್ನು ನೀಡಿದ್ದರು. ಅವರು ಹಾಕಿಕೊಟ್ಟ ಹಾದಿಯಲ್ಲಿ ಪರಿಷತ್ತು ಮುನ್ನಡೆದುಕೊಂಡು ಬಂದಿದೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು. 

ಅನಕೃ ಅವರ 115ನೇ ಜನ್ಮದಿನದ ಪ್ರಯುಕ್ತ ಪರಿಷತ್ತು ನಗರದಲ್ಲಿ ಮಂಗಳವಾರ ಆಯೋಜಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನ್ನಡ ಚಳವಳಿಗಳ ನೇತಾರರಾಗಿದ್ದ ಅನಕೃ ಅವರು‌ ಕನ್ನಡಿಗರಲ್ಲಿ ಭಾಷಾಭಿಮಾತ ಮೂಡಿಸಿದರು. ಬರಹವನ್ನೇ ನಂಬಿ ಬದುಕನ್ನು ಕಟ್ಟಿಕೊಂಡ ಅವರು, ಪತ್ರಿಕಾ ರಂಗದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಬಿ.ಎಂ. ಶ್ರೀಕಂಠಯ್ಯ ಅವರು  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಆರಂಭಿಸಿದ ‘ಕನ್ನಡ ನುಡಿ’ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಅವರ ಮೊದಲ ಕಾದಂಬರಿ ‘ಗೃಹಲಕ್ಷ್ಮಿ’ ಅಕ್ಷರ ಪ್ರೇಮಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ’ ಎಂದು ಹೇಳಿದರು.  

‘ಸಾಹಿತ್ಯ, ಸಂಗೀತ, ಚಿತ್ರಕಲೆ, ನಾಟ್ಯ, ನಾಟಕ ಸೇರಿ ವಿವಿಧ ಕಲೆಗಳಲ್ಲಿ ಅಪಾರ ಒಲವು ಹೊಂದಿದ್ದ ಅನಕೃ, ಕಾದಂಬರಿ, ಕಥೆ ಸಂಕಲನ, ನಾಟಕ, ವಿಮರ್ಶೆ ಸೇರಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಬೆಂಗಳೂರಿನಲ್ಲಿ ಕನ್ನಡ ಉಳಿಸಿ ಬೆಳೆಸುವುದಕ್ಕಾಗಿ ನಿರಂತರ ಹೋರಾಟ ನಡೆಸಿದ ಅವರು, ಕೋಟೆ ರಾಮೋತ್ಸವದಲ್ಲಿ ದಕ್ಷಿಣ ಭಾರತದ ಖ್ಯಾತ ಗಾಯಕಿ ಎಮ್‌.ಎಸ್‌. ಸುಬ್ಬುಲಕ್ಷ್ಮಿ ಅವರು ಕನ್ನಡ ಗೀತೆಗಳನ್ನು ಹಾಡದೆ ಇರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಖ್ಯಾತ ಗಾಯಕಿಯ ಕಾರ್ಯಕ್ರಮ ನಿಲ್ಲಿಸುವುದು ಸರಿಯೇ ಎಂದು ಬರಹಗಾರ ತೀ.ತಾ.ಶರ್ಮ ಆಕ್ಷೇಪ ವ್ಯಕ್ತಪಡಿಸಿದಾಗ, ‘ಕನ್ನಡಕ್ಕೆ ನನ್ನಂಥವರು ಅನೇಕರು ಇರಬಹುದು. ಆದರೆ, ನನಗೆ ಕನ್ನಡ ಒಂದೇ’ ಎಂದು ಹೇಳಿದ್ದರು’ ಎಂದು ಸ್ಮರಿಸಿಕೊಂಡರು.

ADVERTISEMENT

ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಪ್ರೊ.ಎನ್‌.ಎಸ್‌. ಶ್ರೀಧರಮೂರ್ತಿ, ‘ಕನ್ನಡ ಚಿತ್ರ ರಂಗಕ್ಕೆ ಸ್ವಂತಿಕೆ ತಂದುಕೊಡುವಲ್ಲಿ ಅನಕೃ ಪ್ರಮುಖ ಪಾತ್ರ ವಹಿಸಿದ್ದರು. ಮಣಿಪಾಲ ಸಾಹಿತ್ಯ ಸಮ್ಮೇಳನದಲ್ಲಿ ಅವರು ಆಡಿದ ಮಾತುಗಳು ಕನ್ನಡ ಚಿತ್ರರಂಗಕ್ಕೆ ಜೀವಂತಿಕೆ ನೀಡುವಲ್ಲಿ ಮುಖ್ಯಪಾತ್ರ ವಹಿಸಿವೆ. ಬೆಂಗಳೂರಿನಲ್ಲಿ ಕನ್ನಡ ಚಳವಳಿ ಹುಟ್ಟುವಲ್ಲಿ, ಕನ್ನಡಿಗರಿಗೆ ಸ್ವಾಭಿಮಾನ ತುಂಬುವಲ್ಲಿ ಅವರ ಮಾತುಗಳು ಪ್ರೇರಣೆಯಾಗಿದ್ದವು. ಕನ್ನಡ ಸಾಹಿತ್ಯ ಎಲ್ಲ ವರ್ಗದವರನ್ನು ತಲುಪುವುದರಲ್ಲಿ ಅವರ ಕೊಡುಗೆ ದೊಡ್ಡದು’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.