ADVERTISEMENT

ಚಾಮರಾಜಪೇಟೆ ಕ್ಷೇತ್ರ ಸ್ಥಿತಿ–ಗತಿ | ಮತ್ತೆ ತೆಕ್ಕೆಗೆ ಪಡೆಯಲು ಜೆಡಿಎಸ್‌ ತಂತ್ರ

ವಿಧಾನಸಭೆ ಚುನಾವಣೆ

ಅದಿತ್ಯ ಕೆ.ಎ.
Published 17 ಜನವರಿ 2023, 9:18 IST
Last Updated 17 ಜನವರಿ 2023, 9:18 IST
ಜಮೀರ್‌ ಅಹಮದ್‌ ಖಾನ್‌
ಜಮೀರ್‌ ಅಹಮದ್‌ ಖಾನ್‌   

ಬೆಂಗಳೂರು: ನಿರಂತರವಾಗಿ ಚಾಮರಾಜಪೇಟೆ ಕ್ಷೇತ್ರದಿಂದ ಗೆದ್ದು ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವ ಶಾಸಕ ಜಮೀರ್ ಅಹಮದ್‌ ಖಾನ್‌ ಅವರನ್ನು ಹಣಿಯಲು ಜೆಡಿಎಸ್‌ ಹಾಗೂ ಬಿಜೆಪಿ ಚುನಾವಣೆ ಘೋಷಣೆಗೂ ಮೊದಲೇ ತಂತ್ರ ರೂಪಿಸುತ್ತಿವೆ.

ಅಲ್ಪಸಂಖ್ಯಾತ ಸಮುದಾಯದ ಮತದಾರರೇ ನಿರ್ಣಾಯಕವಾಗಿರುವ ಕ್ಷೇತ್ರವು ಜೆಡಿಎಸ್‌ ಹಿಡಿತದಿಂದ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ತೆಕ್ಕೆಗೆ ಜಾರಿತು. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದರೂ ಜಮೀರ್‌ ಪ್ರಭಾವ ಕ್ಷೇತ್ರದಲ್ಲಿ ಕುಂದಿಲ್ಲ.

ಜಮೀರ್‌, ಜೆಡಿಎಸ್‌ನಲ್ಲಿದ್ದಾಗ ಎಚ್‌.ಡಿ.ಕುಮಾರಸ್ವಾಮಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಈಗ ಇಬ್ಬರೂ ಬಹಿರಂಗವಾಗಿಯೇ ವಾಕ್ಸಮರ ಮಾಡುತ್ತಿದ್ದಾರೆ. 2008, 2013ರ ಚುನಾವಣೆಯಲ್ಲಿ ಜಮೀರ್‌ ಅಹಮದ್ ಜೆಡಿಎಸ್‌ನಿಂದ ಸ್ಪರ್ಧಿಸಿ ಜಯಿಸಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಜಮೀರ್‌ಗೆ ಮತ್ತೆ ಕಾಂಗ್ರೆಸ್‌ ಟಿಕೆಟ್ ಲಭಿಸುವುದು ಖಚಿತ. ಅವರ ವಿರುದ್ದ ಜೆಡಿಎಸ್‌, ಬಿಜೆ‍ಪಿಯ ಹುರಿಯಾಳುಗಳು ಯಾರು ಎಂಬ ಕುತೂಹಲ ಮೂಡಿದೆ.

ADVERTISEMENT

ಮಧ್ಯಮ ವರ್ಗದ ಜನರೇ ನೆಲೆಸಿರುವ ಕ್ಷೇತ್ರದಲ್ಲಿ ಸಂಚಾರ, ತ್ಯಾಜ್ಯ ವಿಲೇವಾರಿ, ರಸ್ತೆ ವಿಸ್ತರಣೆಯಂತಹ ಸಮಸ್ಯೆಗಳು ಉಳಿದಿವೆ. ಕಿರಿದಾದ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ ಎಂಬುದು ಸ್ಥಳೀಯರ ಅಳಲು. ಮುಂದಿನ ಚುನಾವಣೆಯಲ್ಲಿ ಜಾತಿಯೋ, ಅಭಿವೃದ್ಧಿ ಕೆಲಸಗಳು ಮುಖ್ಯವಾಗುವುದೋ ಎನ್ನುವ ಕುರಿತು ಚರ್ಚೆಗಳು ನಡೆಯುತ್ತಿವೆ.

ಜಮೀರ್‌ ಹಿಡಿತದಿಂದ ಕ್ಷೇತ್ರವನ್ನು ಮತ್ತೆ ತೆಕ್ಕೆಗೆ ಪಡೆಯಲು ಜೆಡಿಎಸ್‌ ಕ್ಷೇತ್ರದ ಹಲವು ಮುಖಂಡರನ್ನು ಪಕ್ಷಕ್ಕೆ ಸೆಳೆಯುತ್ತಿದೆ. ಬಿಬಿಎಂಪಿಯ ಮಾಜಿ ಸದಸ್ಯೆ ಗೌರಮ್ಮ ಅವರ ಪತಿ, ಕಾಂಗ್ರೆಸ್‌ ಮುಖಂಡ ಗೋವಿಂದರಾಜು ಹಾಗೂ ಅವರ ಬೆಂಬಲಿಗರನ್ನು ಜೆಡಿಎಸ್‌ ಸೆಳೆಯುವ ಮೂಲಕ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಿ.ಎಂ.ಇಬ್ರಾಹಿಂ ಅವರ ಸಮ್ಮುಖದಲ್ಲೇ ಗೋವಿಂದರಾಜು, ಜೆಡಿಎಸ್‌ ಸೇರಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಜಮೀರ್‌ ಪರ ಗೋವಿಂದರಾಜು ಕೆಲಸ ಮಾಡಿದ್ದರು. ಪಕ್ಷ ಬಿಟ್ಟಿರುವುದು ‘ಕೈ’ ಪಡೆಗೆ ಆತಂಕ ತಂದೊಡ್ಡಿದೆ.

‘ಕ್ಷೇತ್ರದಲ್ಲಿ ನಿರೀಕ್ಷಿತ ಕೆಲಸಗಳು ಆಗಿಲ್ಲ. ಆ ಕಾರಣಕ್ಕಾಗಿಯೇ ಕಾಂಗ್ರೆಸ್ ಬಿಟ್ಟಿರುವೆ’ ಎಂದು ಆಪ್ತರ ಬಳಿ ಗೋವಿಂದರಾಜು ಹೇಳಿಕೊಂಡಿದ್ದಾರೆ. ಈ ನಡುವೆ ಪಾಲಿಕೆ ಮಾಜಿ ಸದಸ್ಯ ಇಮ್ರಾನ್‌ ಪಾಷಾ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ.

‘ಲಹರಿ ರೆಕಾರ್ಡಿಂಗ್‌ ಸಂಸ್ಥೆ’ಯ ಲಹರಿ ವೇಲು ಬಿಜೆಪಿ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. ಈದ್ಗಾ ಮೈದಾನದ ಹೋರಾಟದಲ್ಲೂ ಸ್ಥಳೀಯರೊಂದಿಗೆ ವೇಲು ಕಾಣಿಸಿಕೊಂಡಿದ್ದು, ರಾಜಕೀಯಕ್ಕೆ ಬರುವ ಭೂಮಿಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈದ್ಗಾ ಮೈದಾನದ ಹೋರಾಟ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಚಾಮರಾಜಪೇಟೆ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಅಂಬೇಡ್ಕರ್‌ ಸೇನೆಯ ಅಧ್ಯಕ್ಷ ಸುನಿಲ್‌ಬಾಬು ಸಹ ಟಿಕೆಟ್‌ ಆಕಾಂಕ್ಷಿ.

ಇದೇ ಕ್ಷೇತ್ರದಲ್ಲಿ ನಡೆದಿದ್ದ ರಕ್ತದಾನ ಶಿಬಿರಕ್ಕೆ ಬಿಜೆಪಿ ಶಾಸಕರು ಹಾಗೂ ಸಂಸದರನ್ನು ಕರೆಸಿ ‘ಸೈಲೆಂಟ್’ ಸುನಿಲ್‌ ಕುಮಾರ್‌ ಸಂಚಲನ ಸೃಷ್ಟಿಸಿದ್ದರು. ‘ಸೈಲೆಂಟ್‌ ಸುನಿಲ್‌’ ಸಹ ಟಿಕೆಟ್‌ಗೆ ಪ್ರಯತ್ನಿಸಿ ಈ ಶಿಬಿರ ಆಯೋಜಿಸಿದ್ದರು ಎನ್ನಲಾಗಿದೆ. ಆಮ್‌ ಆದ್ಮಿ ಪಕ್ಷದಿಂದ (ಎಎಪಿ) ಜಗದೀಶ್‌ ಚಂದ್ರ ಸ್ಪರ್ಧಿಸುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.