ADVERTISEMENT

ಗೋವಿಂದರಾಜನಗರ ಕ್ಷೇತ್ರ: ಸಾಂಪ್ರದಾಯಿಕ ಎದುರಾಳಿಗಳೇ ಪ್ರಬಲ ಆಕಾಂಕ್ಷಿಗಳು

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 13:10 IST
Last Updated 23 ಜನವರಿ 2023, 13:10 IST
   

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ 2009ರ ಉಪ ಚುನಾವಣೆಯಿಂದ ಈಚೆಗೆ ಸಚಿವ ವಿ. ಸೋಮಣ್ಣ ಮತ್ತು ಶಾಸಕ ಎಂ. ಕೃಷ್ಣಪ್ಪ ಅವರ ಪುತ್ರ ಪ್ರಿಯಾಕೃಷ್ಣ ನಡುವಿನ ರಾಜಕೀಯ ಕದನದ ಅಖಾಡವಾಗಿ ಹೊರಹೊಮ್ಮಿದೆ. ಈ ಬಾರಿಯೂ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿ ಆಗುವ ಸಾಧ್ಯತೆ ನಿಚ್ಚಳವಾಗಿರುವುದರಿಂದ ಬಿಜೆಪಿ, ಕಾಂಗ್ರೆಸ್‌ನಲ್ಲಿ ಇತರ ಆಕಾಂಕ್ಷಿಗಳೇ ಇಲ್ಲ.

2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಸೋಮಣ್ಣ, ಕೆಲವೇ ತಿಂಗಳುಗಳಲ್ಲಿ ಬಿಜೆಪಿಗೆ ವಲಸೆ ಹೋಗಿದ್ದರು. 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಪಕ್ಕದ ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರ ಮಗ ಪ್ರಿಯಾಕೃಷ್ಣ ಅವರನ್ನೇ ಕಾಂಗ್ರೆಸ್‌ ಕಣಕ್ಕಿಳಿಸಿತ್ತು. ಅಲ್ಲಿಯವರೆಗೂ ‘ಆಪ್ತ ಮಿತ್ರ’ರಾಗಿದ್ದ ಕೃಷ್ಣಪ್ಪ ಮತ್ತು ಸೋಮಣ್ಣ ಚುನಾವಣೆಯಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಇಳಿದಿದ್ದರು. ಬಿ.ಎಸ್‌. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಸೋಮಣ್ಣ ಈ ಚುನಾವಣೆಯಲ್ಲಿ ಸೋಲು ಕಂಡಿದ್ದರು.

2013ರಲ್ಲಿ ಕ್ಷೇತ್ರ ಬದಲಿಸಿ ವಿಜಯನಗರದಲ್ಲಿ ಸ್ಪರ್ಧಿಸಿದ್ದ ಸೋಮಣ್ಣ ಅಲ್ಲಿಯೂ ಸೋಲು ಅನುಭವಿಸಿದ್ದರು. ಆಗ ಪ್ರಿಯಾಕೃಷ್ಣ ಗೋವಿಂದರಾಜನಗರ ಕ್ಷೇತ್ರದಲ್ಲಿ ಪುನರಾಯ್ಕೆ ಆಗಿದ್ದರು. 2018ರ ಚುನಾವಣೆಯಲ್ಲಿ ಪುನಃ ಗೋವಿಂದರಾಜನಗರಕ್ಕೆ ಬಂದು ಸ್ಪರ್ಧಿಸಿದ್ದ ಸೋಮಣ್ಣ, ಪ್ರಿಯಾಕೃಷ್ಣ ಅವರನ್ನು ಮಣಿಸಿದ್ದರು. 2023ರ ಚುನಾವಣೆಯಲ್ಲಿ ಮತ್ತೆ ಮುಖಾಮುಖಿ ಆಗಲು ಇಬ್ಬರೂ ಸಜ್ಜಾಗುತ್ತಿದ್ದಾರೆ. ಸೋಮಣ್ಣ ಕ್ಷೇತ್ರ ಬದಲಿಸುವ ವದಂತಿ ಪದೇ ಪದೇ ಹರಿದಾಡುತ್ತಿದೆ. ಆದರೆ, ಅವರು ಮೌನ ಮುರಿದಿಲ್ಲ.

ADVERTISEMENT

ಬಿಬಿಎಂಪಿ ಮಾಜಿ ಸದಸ್ಯರೂ ಆಗಿರುವ ಜೆಡಿಎಸ್‌ನ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಆರ್‌. ಪ್ರಕಾಶ್‌ ಅವರಿಗೆ ಜೆಡಿಎಸ್‌ ಟಿಕೆಟ್‌ ಘೋಷಿಸಿದೆ. ಬಿಜೆಪಿಯಲ್ಲಿ ಸೋಮಣ್ಣ ಹೊರತಾಗಿ ಆಕಾಂಕ್ಷಿಗಳಿಲ್ಲ. ಕಾಂಗ್ರೆಸ್‌ನಲ್ಲಿ ಪ್ರಿಯಾಕೃಷ್ಣ ಒಬ್ಬರೇ ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಮೂಲಸೌಕರ್ಯ ಅಭಿವೃದ್ಧಿ ಮತ್ತು ಜಾತಿ ಈ ಕ್ಷೇತ್ರದಲ್ಲಿ ಚುನಾವಣೆ ಮೇಲೆ ನಿರ್ಣಾಯಕವಾಗಿ ಪ್ರಭಾವ ಬೀರುವ ಅಂಶಗಳು. ಕೋವಿಡ್‌ ಸಂಕಷ್ಟದ ಅವಧಿಯಲ್ಲಿ ಜನರಿಗೆ ನೆರವಾದ ವಿಚಾರವೂ ಇಲ್ಲಿ ಈ ಬಾರಿ ಚುನಾವಣಾ ವಿಷಯವಾಗುವ ಸಾಧ್ಯತೆ ದಟ್ಟವಾಗಿದೆ. ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಮೇಲೆ ಹಕ್ಕು ಸಾಧಿಸುವ ಪ್ರಯತ್ನ ಹಾಲಿ–ಮಾಜಿ ಶಾಸಕರಿಂದ ನಡೆಯುತ್ತಿದೆ. ಹಲವು ತಿಂಗಳ ಹಿಂದೆಯೇ ಈ ಕ್ಷೇತ್ರದಲ್ಲಿ ಚುನಾವಣಾ ಕಾವು ಆವರಿಸಿಕೊಂಡಿದ್ದು, ಪಕ್ಷಾಂತರ ಪರ್ವ ನಿರಂತರವಾಗಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.