ADVERTISEMENT

ಪದ್ಮನಾಭನಗರ ವಿಧಾನಸಭೆ ಕ್ಷೇತ್ರ ಸ್ಥಿತಿ–ಗತಿ: ಅಶೋಕಗೆ ಕೈ– ದಳ ಪೈಪೋಟಿ

Published 19 ಜನವರಿ 2023, 10:22 IST
Last Updated 19 ಜನವರಿ 2023, 10:22 IST
ಆರ್.ಅಶೋಕ
ಆರ್.ಅಶೋಕ   

ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ರಚನೆಯಾದ ಮೇಲೆ ಮೂರು ಬಾರಿಯೂ ಆರ್‌. ಅಶೋಕ ‘ಹ್ಯಾಟ್ರಿಕ್‌’ ಶಾಸಕರಾಗಿದ್ದು, ಪ್ರಸ್ತುತ ಕಂದಾಯ ಇಲಾಖೆ ಸೇರಿದಂತೆ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿಭಾಯಿಸಿದ್ದಾರೆ. ಇವರಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪೈಪೋಟಿ ನೀಡುತ್ತಿದ್ದರೂ, ಸೋಲಿಸಲು ಸಾಧ್ಯವಾಗಿಲ್ಲ. ಈ ಬಾರಿ ಸೋಲಿಸಲೇಬೇಕು ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹಟ ತೊಟ್ಟಿವೆ.

ಅಭಿವೃದ್ಧಿ ವಿಷಯಕ್ಕೆ ಬಂದರೆ ಬಿಬಿಎಂಪಿ ವ್ಯಾಪ್ತಿಯಿಂದ ಆಗಬೇಕಾದ ಕೆಲಸಗಳು ಕ್ರಿಯಾಶೀಲ ಕಾರ್ಪೊರೇಟರ್‌ಗಳ ಕಾಲದಲ್ಲಿ ನಡೆದಿವೆ. ಆದರೆ, ಸ್ಮಶಾನ, ಆಟದ ಮೈದಾನ, ಶಾಲೆ– ಕಾಲೇಜುಗಳು ಪದ್ಮನಾಭನಗರ ಕ್ಷೇತ್ರದಲ್ಲಿ ಅಗತ್ಯಕ್ಕನುಸಾರವಾಗಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳು ರಾಜಕಾಲುವೆಗಳ ಮೇಲಿದ್ದರೂ ಕಾರ್ಯನಿರ್ವಹಿಸುತ್ತಿಲ್ಲ. ಈ ಕ್ಷೇತ್ರ ವ್ಯಾಪ್ತಿಯ ಬಿಜಿಪಿ ನಾಯಕರು ಬಿಬಿಎಂಪಿ ಸದಸ್ಯರಾಗಿ, ಆಡಳಿತ ಪಕ್ಷದ ನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಸೇರಿದಂತೆ ಹಲವು ಅಧಿಕಾರಗಳಲ್ಲಿದ್ದರು. ಆಗ ಆಯಾ ವಾರ್ಡ್‌ಗಳ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಆದರೆ, ಕೊಳೆಗೇರಿ ಹಾಗೂ ಬಡವರ್ಗದ ಜನರು ಅತಿ ಹೆಚ್ಚಿರುವ ಈ ಪ್ರದೇಶದಲ್ಲಿ ಬಿಬಿಎಂಪಿಯ ಒಂದು ಶಾಲೆ ಮಾತ್ರ ಇದೆ. ಶಾಲಾ–ಕಾಲೇಜುಗಳ ಸ್ಥಾಪನೆಯ ಹಲವು ಬೇಡಿಕೆಗಳು ಶಾಸಕರ ಮಟ್ಟದಲ್ಲಿ ಈಡೇರಿಲ್ಲ. ಮೂಲಸೌಕರ್ಯದ ಕೊರತೆ ಎದ್ದುಕಾಣುತ್ತಿದೆ.

ಬಿಜೆಪಿಯಿಂದ ಈ ಬಾರಿಯೂ ಆರ್‌. ಅಶೋಕ ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ದೆಹಲಿ ನಾಯಕರ ಪಟ್ಟೇನಾದರೂ ಬದಲಾದರೆ ಈ ಕ್ಷೇತ್ರದಲ್ಲಿ ಮಾಜಿ ಕಾರ್ಪೊರೇಟರ್‌ಗಳು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅವರಲ್ಲಿ ಎಲ್‌. ಶ್ರೀನಿವಾಸ್‌, ಎ.ಎಚ್‌. ಬಸವರಾಜು ಮುಂಚೂಣಿಯಲ್ಲಿದ್ದಾರೆ. ಎನ್‌.ಆರ್‌. ರಮೇಶ್‌ ಕೂಡ ಆಕಾಂಕ್ಷಿ.

ADVERTISEMENT

ಕಾಂಗ್ರೆಸ್‌ನಲ್ಲಿ ಈ ಬಾರಿ ಸ್ಥಳೀಯರಾದ, ಗುತ್ತಿಗೆದಾರ ರ‌ಘುನಾಥ ನಾಯ್ಡು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಪಕ್ಷದ ಬೃಹತ್‌ ಕಚೇರಿಯನ್ನು ಪದ್ಮನಾಭನಗರ ಕ್ಷೇತ್ರದಲ್ಲಿ ಒಂದೆರಡು ವರ್ಷದಿಂದ ಸ್ಥಾಪಿಸಿ, ಮೇಕೆದಾಟು, ಭಾರತ್‌ ಜೋಡೊ ಪಾದಯಾತ್ರೆ ಸೇರಿ ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿ ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ ಅವರ ಹೋರಾಟಗಳಿಗೆ ಬೆನ್ನೆಲುಬಾಗಿದ್ದು, ಈ ಬಾರಿ ಟಿಕೆಟ್‌ ಪಡೆದು, ನಾಯ್ಡು ಸಮುದಾಯ ಸೇರಿ ಕಾಂಗ್ರೆಸ್‌ನ ಮೂಲಮತಗಳನ್ನು ಸೆಳೆಯುವ ಲೆಕ್ಕಾಚಾರ ಹಾಕಿದ್ದಾರೆ.

ಇವರಲ್ಲದೆ, ಮಾಜಿ ಮೇಯರ್‌ ವೆಂಕಟೇಶ ಮೂರ್ತಿ ಅವರು ಕಾಂಗ್ರೆಸ್‌ ಸೇರಿಕೊಂಡಿದ್ದು, ಸಮುದಾಯದ ಮತ ಸೇರಿದಂತೆ ಕಾರ್ಪೊರೇಟರ್‌ ಆಗಿದ್ದ ಸಂದರ್ಭದಿಂದ ಜೊತೆಗಿದ್ದ ಮತದಾರರ ಬೆಂಬಲ ಪಡೆಯುವ ಆಕಾಂಕ್ಷಿಯಾಗಿದ್ದಾರೆ. 2008ರಲ್ಲಿ ಸೋತಿದ್ದ ಹಾಗೂ ಕಳೆದ ಬಾರಿ ಬಿ ಫಾರಂ ಪಡೆದರೂ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದ ಗುರಪ್ಪ ನಾಯ್ಡು ಹಾಗೂ ಇದೀಗ ಪ್ರಚಾರದಲ್ಲಿರುವ ಸಂಜಯ್‌ ಗೌಡ ಅವರೂ ಕಣಕ್ಕಿಳಿಯಲು ಆಸಕ್ತರಾಗಿದ್ದಾರೆ.

ತನ್ನದೇ ಆದ ಮತ ಬ್ಯಾಂಕ್‌ ಹೊಂದಿರುವ ಜೆಡಿಎಸ್‌ ಯಾರನ್ನು ಕಣಕ್ಕೆ ಇಳಿಸಲಿದೆ ಎಂಬ ಸೂಚನೆಯನ್ನು ಕೊಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.